ಅ.16ರಂದು ನಗರದಲ್ಲಿ ಬೃಹತ್ ಪ್ರತಿಭಟನೆ: ಹೋರಾಟ ಸಮಿತಿ ಸದಸ್ಯ ಎಚ್.ಸಿ.ಶ್ಯಾಂಪ್ರಸಾದ್ ಮಾಹಿತಿ

Madigara Internal Reservation Enforcement Struggle Committee press conference Mandya
Published on

ಮಂಡ್ಯ: ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಅ.16ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗರ ಒಳಮೀಸಲಾತಿ ಜಾರಿಗಾಗಿ ಹೋರಾಟ ಸಮಿತಿ ಸದಸ್ಯ ಎಚ್.ಸಿ.ಶ್ಯಾಂಪ್ರಸಾದ್ ತಿಳಿಸಿದರು.

ಮಾದಿಗ ಸಮುದಾಯ ತೀವ್ರ ಶೋಷಣೆಗೆ ಒಳಗಾಗಿದ್ದು, ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸದಾಶಿವ ಆಯೋಗ ರಚನೆ ಮಾಡಲಾಗಿತ್ತು. ಅದರಂತೆ ಸಮಗ್ರ ತನಿಖೆ ನಡೆಸಿ ಸಮುದಾಯಕ್ಕೆ ಶೇ.6ರಷ್ಟು ಒಳ ಮೀಸಲಾತಿ ನೀಡುವಂತೆ ವರದಿ ಸಲ್ಲಿಸಿ 12 ವರ್ಷಗಳೇ ಕಳೆದಿದೆ. ಆದರೂ ಅನುಷ್ಠಾನಗೊಳಿಸಲು ಸರ್ಕಾರಗಳು ಮೀನಾಮೇಷ ಎಣಿಸುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಸುಪ್ರೀಂ ಕೋರ್ಟ್ ಮೀಸಲಾತಿ ನೀಡಲು ಆದೇಶ ನೀಡಿ ಮೂರು ತಿಂಗಳಾದರೂ ರಾಜ್ಯಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಮೀಸಲಾತಿ ಜಾರಿಗೆ ಒತ್ತಾಯಿಸುವ ನಿಟ್ಟಿನಲ್ಲಿ 16ರಂದು ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಗುವುದು ಎಂದು ವಿವರಿಸಿದರು.

ಸಮಿತಿಯ ಅಧ್ಯಕ್ಷ ಸಿ.ಕೆ.ಪಾಪಯ್ಯ ಮಾತನಾಡಿ, ನಗರದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಸುಮಾರು 5000 ಜನರು ಭಾಗವಹಿಸಲಿದ್ದಾರೆ. ಈ ಮೂಲಕ ಸರ್ಕಾರವನ್ನು ಒಳಮೀಸಲಾತಿ ಜಾರಿಗೆ ಒತ್ತಾಯ ಮಾಡಲಾಗುವುದು ಎಂದು ಹೇಳಿದರು.

ಮುಖಂಡರಾದ ಶಂಕರ್‌ಪ್ರಸಾದ್, ಪುಟ್ಟಸ್ವಾಮಿ ಕನ್ನಲಿ, ನಂಜುಂಡ ಮೌರ್ಯ, ಅನ್ನದಾನಿ, ಸಿದ್ದರಾಜು, ಬಿ.ಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net