

ಕುಕನೂರು: ಮಾದಿಗ ಜನಾಂಗದವರಿಗೆ ವಿವಿಧ ಕಾರ್ಯಕ್ರಮದಡಿ ಸರ್ಕಾರದಿಂದ ಅನೇಕ ಸೌಲಭ್ಯಗಳು ಸಿಗಬೇಕಾಗಿದೆ ಎಂದು ಕರ್ನಾಟಕ ಮಾದಿಗ ದಂಡೋರ ಸಮಿತಿ ತಾಲೂಕು ಅಧ್ಯಕ್ಷ ಹನುಮಂತಪ್ಪ ಮುತ್ತಾಳ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ಮಾದಿಗ ದಂಡೋರ ತಾಲೂಕು ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮಾದಿಗರು ದಾಖಲಿಸಿದ ಅಟ್ರಾಸಿಟಿ ಪ್ರಕರಣಗಳೂ ಐದಾರು ವರ್ಷ ಗತಿಸಿದರೂ ಸರ್ಕಾರ ಧನಸಹಾಯ ನೀಡಿಲ್ಲ. ಸರ್ಕಾರ ಕೂಡಲೇ ಇಂತಹ ಪ್ರಕರಣಗಳಿಗೆ ಧನ ಸಹಾಯ ನೀಡಬೇಕೆಂದು ಒತ್ತಾಯಿಸಿದರು.
ಮಾದಿಗ ಜನಾಂಗದವರು ಭೂಮಿಯನ್ನು ಸುಮಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು, ಸರ್ಕಾರಿ ಭೂಮಿಗಳನ್ನು ಸಕ್ರಮಗೊಳಿಸಬೇಕು. ಆಶ್ರಯ ಮನೆ ನಿರ್ಮಾಣಕ್ಕೆ ಭೂಮಿಯನ್ನು ಮಂಜೂರು ಮಾಡಬೇಕು. ಪೊಲೀಸ್ ಇಲಾಖೆಯಿಂದ ಪ್ರತಿಯೊಂದು ಹಳ್ಳಿಯಲ್ಲೂ ಕಾನೂನಿನ ಅರಿವು ಮೂಡಿಸಲು ಜಾಗೃತಿ ವಹಿಸಬೇಕೆಂದರು.
ತಾಲೂಕು ಸಮಿತಿ ಕಾರ್ಯಾಧ್ಯಕ್ಷ ರವಿ ಎಸ್.ಹಿರೇಮನಿ, ಪ್ರಮುಖರಾದ ಹನುಮಂತಪ್ಪ ಸಣ್ಣಮನಿ, ರಮೇಶ ದೊಡ್ಡಮನಿ, ನಾಗರಾಜ ರ‌್ಯಾವಣಿಕಿ, ನಿಂಗಪ್ಪ ಮುತ್ತಾಳ ಇತರರಿದ್ದರು.