

ವಿಜಯಪುರ: ಒಳ ಮೀಸಲಾತಿ ಶೀಘ್ರವಾಗಿ ಜಾರಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘ (ರಿ)ದಿಂದ ಶನಿವಾರ ಪ್ರತಿಭಟನೆ ನಡೆಸಿ ಕೊಲ್ಹಾರ್ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕೊಲ್ಹಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿ ಎದುರು ಕೆಲ ಕಾಲ ಘೋಷಣೆ ಕೂಗಿದರು. ಬಳಿಕ ಮನವಿ ಅರ್ಪಿಸಿದರು.
ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಹಾಗೂ ಜೆ.ಸಿ.ಮಾಧುಸ್ವಾಮಿ ವರದಿಯಂತೆ ಆಗಸ್ಟ್ 15 ರ ಒಳಗೆ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೋಳಿಸಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು. ಒಳ ಮೀಸಲಾತಿ ಜಾರಿಯಾಗುವಂತೆ ಸುಪ್ರೀಂ ಕೋರ್ಟ್ ಸಹ ನಿರ್ದೇಶನ ನೀಡಿ ವರ್ಷ ಗತಿಸಿದರೂ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುತ್ತಿಲ್ಲ. ಇದರಿಂದ ಮಾದಿಗ ಜನಾಂಗಕ್ಕೆ ಘೋರ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಇರುವ ಮೀಸಲಾತಿ ಪ್ರಮಾಣ ಶೇ. 17 ರಷ್ಟು ಹೆಚ್ಚಿಸಿ ಮಾದರ, ಸಮಗಾರ, ಡೋಹರ, ಮಚಗಾರ ಸಮುದಾಯದವರಿಗೆ ಶೇ.6 ರಷ್ಟು ಒಳ ಮೀಸಲಾತಿ ನೀಡುವಂತೆ ಆಯೋಗ ಶಿಫಾರಸ್ಸು ಮಾಡಿದೆ. ಆದರೆ ಸದ್ಯದ ಸರ್ಕಾರದಲ್ಲಿ ಇರುವು ಕೆಲವರು ಒಳಮೀಸಲಾತಿ ಜಾರಿಯಾಗಲು ಅಡ್ಡಿಪಡಿಸುತ್ತಿದ್ದಾರೆ. ಅಂಥವರ ಮಾತಿಗೆ ಸಿಎಂ ಕಿವಿಗೊಡಬಾರದು ಎಂದರು.
ಜಿಲ್ಲಾಧ್ಯಕ್ಷ ಎಂ.ಆರ್. ದೊಡಮನಿ, ಜಿಲ್ಲಾ ಉಪಾಧ್ಯಕ್ಷ ಲಚ್ಚಪ್ಪ ಎಲ್. ಮಾದರ, ಗ್ರಾಮೀಣ ವಿದ್ಯಾ ವರ್ಧಕ ಸಂಸ್ಥೆಯ ಕಾರ್ಯದರ್ಶಿ ಎಲ್.ಎಂ. ಬೆಳ್ಳುಬ್ಬಿ, ಜಿಲ್ಲಾ ಕಾರ್ಯದರ್ಶಿ ವಿಠಲ ಕವಲಗಿ, ಕೋಲ್ಹಾರ ತಾಲೂಕಾಧ್ಯಕ್ಷ ರವಿ ಸಿದ್ದನಾಥ್, ನಿಡಗುಂದಿ ತಾಲೂಕಾಧ್ಯಕ್ಷ ಶಿವಾನಂದ ಪೂಜಾರಿ, ಶಿವಾನಂದ ಬಳ್ಳಬಟ್ಟಿ, ಬಬಲೇಶ್ವರ ತಾಲೂಕಾಧ್ಯಕ್ಷ ಸಾಬು ಗುಣದಾಳ ಮತ್ತಿತರರಿದ್ದರು.