

ಮಂಡ್ಯ: ಕಾಂಗ್ರೆಸ್ ಎಲ್ಲ ಜಾತಿ ಮತ್ತು ಸಮುದಾಯಕ್ಕೆ ಒಳಿತು ಮಾಡುವ ಪಕ್ಷ. ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ವೇಳೆ ಜಾತ್ಯಾತೀತ ಹಾಗೂ ಧರ್ಮಾತೀತವಾಗಿ ಯೋಜನೆಗಳನ್ನೂ ಜಾರಿಗೊಳಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಪತ್ರಕರ್ತರ ಸಂಘದಲ್ಲಿ ಆಯೋಜನೆಗೊಂಡಿದ್ದ ಮಾದಿಗ ಸಮುದಾಯದ ಮುಖಂಡ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಅಧಿಕಾರದಲ್ಲಿದ್ಧಾಗ ಸಾಧನೆ ಮಾಡಲಾಗದೇ ಅಧಿಕಾರವಿಲ್ಲದಾಗ ಅಲವತ್ತುಗೊಳ್ಳುತ್ತಾರೆ. ಜಿಲ್ಲೆಯನ್ನು ಅಭಿವೃದ್ದಿ ಮಾಡುವ ಚಿಂತನೆ ಮೈತ್ರಿ ಪಕ್ಷಗಳ ನಾಯಕರಲ್ಲಿಲ್ಲ. 14 ತಿಂಗಳ ಕಾಲ ಅಧಿಕಾರದಲ್ಲಿದ್ದಾಗ ಜಿಲ್ಲೆ ಹಾಗೂ ಯಾವುದೇ ಜನಾಂಗಕ್ಕೆ ಕುಮಾರಸ್ವಾಮಿ ಕೊಡುಗೆ ಏನೆಂದು ಪ್ರಶ್ನಿಸಿದರು.
ಮಾದಿಗ ಸಮುದಾಯದ ಅಭಿವೃದ್ದಿಗೆ ಬೇಕಾದ ಸಹಕಾರ ಮಾಡುವ ಜತೆಗೆ ಮುಂದಿನ ದಿನಗಳಲ್ಲಿ ಸರ್ಕಾರ ನಾಮ ನಿರ್ದೇಶನದಲ್ಲಿ ಜನಾಂಗಕ್ಕೆ ನ್ಯಾಯ ಕಲ್ಪಿಸಲಾಗುತ್ತದೆ. ಸಮಾಜದ ಎಲ್ಲ ಬಂಧುಗಳು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಗೆಲುವಿಗೆ ಸಹಕರಿಸಬೇಕೆಂದರು.
ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಶ್ರೀರಂಗಪಟ್ಟಣದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂಜೂರಾಗಿದ್ದ ಬಾಬು ಜಗಜೀವನ್ ರಾಂ ಕಟ್ಟಡ ಪೂರ್ಣಗೊಳಿಸಲು ಬದ್ದನಾಗಿದ್ದೇನೆ. ಜನಾಂಗದ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತೇನೆ. ಇದಕ್ಕಾಗಿ ಪಕ್ಷದ ಅಭ್ಯರ್ಥಿ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಶಾಸಕ ರವಿಕುಮಾರ್ ಗಣಿಗ, ಬಾಬು ಜಗಜೀವನ್ ರಾಂ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಆರ್.ಚಂದ್ರಶೇಖರ್, ಹನಿಯಂಬಾಡಿ ಶೇಖರ್ ಇತರರಿದ್ದರು.