

ದಾವಣಗೆರೆ: ಬಿಜೆಪಿ ಆಡಳಿತದ ಅವಧಿಯಲ್ಲಿ ಜನಪರ ಕಾಳಜಿ ಇಲ್ಲದೇ ಸಂವಿಧಾನ ವಿರೋಧಿ ನೀತಿ ಅನುಸರಿಸಿದ್ದರಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿತು ಎಂದು ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಎಚ್.ಸಿ. ಗುಡ್ಡಪ್ಪ ಹೇಳಿದರು.
ಅಶೋಕ ರಸ್ತೆಯಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಮಾದಿಗ ದಂಡೋರ ಸಮಿತಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ,
ಒಳ ಮೀಸಲಾತಿ ವರ್ಗೀಕರಣದಿಂದ ಬಿಜೆಪಿಗೆ ಸೋಲಾಯಿತು ಎಂದು ಹೇಳಿಕೊಳ್ಳುವ ಬಿಜೆಪಿ ಮುಖಂಡರ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿದರು.
ಸರ್ಕಾರಿ ಸಂಸ್ಥೆಗಳ ಖಾಸಗೀಕರಣ, ಹಿಂದುಳಿದ ಸಮುದಾಯವರ ಮೇಲಿನ ದೌರ್ಜನ್ಯ ಪ್ರಕರಣ ಸೂಕ್ತ ರೀತಿ ತನಿಖೆ ನಡೆಸಿ ಅಪರಾಧಿಗಳ ಶಿಕ್ಷೆ
ನೀಡದೆ ಅವರ ರಕ್ಷಣೆಗೆ ಮುಂದಾಗಿದ್ದು ಬಿಜೆಪಿ ಪಕ್ಷ ಸೋಲಲು ಪ್ರಮುಖ ಕಾರಣ ಎಂಬುದನ್ನು ಬಿಜೆಪಿ ಮುಖಂಡರು ಅರಿತುಕೊಳ್ಳಬೇಕು ಎಂದರು.
ಕಳೆದ ಎರಡೂವರೆ ದಶಕಗಳಿಂದ ಪ. ಜಾತಿಯಲ್ಲಿರುವ 101 ಉಪ ಜಾತಿಗಳಲ್ಲಿ ಮಾದಿಗರೇ ಹೆಚ್ಚಾಗಿದ್ದಾರೆ.
ಉಪಜಾತಿಗಳು ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳಾಗಿವೆ ಎಂದು ತಿಳಿಸಿದರು.
ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ವರ್ಗೀಕರಣ ಮಾಡಬೇಕಿದೆ. ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಮಾದಿಗ ದಂಡೋರ ಮತ್ತು ಇತರ ಸಂಘ ಸಂಸ್ಥೆಗಳು ಹೋರಾಡುತ್ತಿವೆ ಎಂದರು.
ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸು ಮಾಡದೆ, ಚುನಾವಣೆ ನಿಗದಿ ಆಗುವುದಕ್ಕಿಂತ ಮುನ್ನ ತರಾತುರಿ ನಿರ್ಧಾರ
ತೆಗೆದುಕೊಂಡಿದ್ದು, ಇತರೆ ಸಮುದಾಯ ಪ್ರತಿಭಟಿಸಿದಾಗ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಶಿಫಾರಸು ಮಾಡಿಲ್ಲ ಎಂಬ ಗೊಂದಲದ ಹೇಳಿಕೆ ನೀಡಿದ್ದರು ಎಂದರು.
ಚುನಾವಣೆ ಬಳಿಕ ಬಿಜೆಪಿ ಶಾಸಕ ಬಿ.ಪಿ. ಹರೀಶ್, ಎಂ. ಚಂದ್ರಪ್ಪ ಮತ್ತು ಸಂಸದ ಜಿ.ಎಂ. ಸಿದ್ದೇಶ್ವರ ಮಾದಿಗರಿಂದಲೇ ಹಿನ್ನಡೆಯಾಯಿತು ಎಂಬ ಹೇಳಿಕೆ ನೀಡಿದ್ದು ಸರಿಯಲ್ಲವೆಂದರು.
ಮಾಯಕೊಂಡ ಅಧ್ಯಕ್ಷ ಈಚಘಟ್ಟ ಕೆಂಚಪ್ಪ ಮಾತನಾಡಿ, ಮೀಸಲು ಕ್ಷೇತ್ರಗಳಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ ಬಿ.ಎಂ. ವಾಗೀಶ್ ಸ್ವಾಮಿ ಅವರ ಪತ್ನಿಯನ್ನು ಸ್ಪರ್ಧಿಸಲು ಜಿಲ್ಲೆಯ ಬಿಜೆಪಿ ಪಕ್ಷದ ನಾಯಕರ ಕುಮ್ಮಕ್ಕು ಕಾರಣ ಎಂದರು.
ತಾಲೂಕು ಉಪಾಧ್ಯಕ್ಷ ಹುಣಸೇಕಟ್ಟೆ ಬಸವರಾಜ, ಜಿಲ್ಲಾ ಕಾರ್ಯದರ್ಶಿ ಆನಗೋಡು ಬಿ.ಎಸ್. ಕೃಷ್ಣಮೂರ್ತಿ, ಹರಿಹರ ತಾಲೂಕು ಅಧ್ಯಕ್ಷ ಎ.ಕೆ. ನಾಗೇಂದ್ರಪ್ಪ, ಜಗಳೂರು ಅಧ್ಯಕ್ಷ ಜಿ.ಎಚ್. ಮಹೇಶ್, ದಾನಪ್ಪ ದೊಡ್ಡಮನೆ, ಬಿ. ಮಲ್ಲೇಶಪ್ಪ ಮಳಲಕೆರೆ, ಎ.ಕೆ. ಶೇಖರಪ್ಪ ಇತರರಿದ್ದರು.