ಕಾಂಗ್ರೆಸ್‌ನಿಂದ ಮಾದಿಗರಿಗೆ ಅನ್ಯಾಯ

2912kLB07
Published on

ಕಲಬುರಗಿ: ಸಿದ್ದರಾಮಯ್ಯ ಐದು ವರ್ಷ ಆಳ್ವಿಕೆ ನಡೆಸಿದರೂ ಒಳಮೀಸಲಾತಿ ಜಾರಿ ಮಾಡಿಲ್ಲ. ಸದಾಶಿವ ಆಯೋಗ ರಚಿಸಿ ಮೂಗಿಗೆ ತುಪ್ಪ ಸವರುವ ಕೆಲಸ ಕಾಂಗ್ರೆಸ್ ಮಾಡಿದೆ. ಪ್ರತಿ ಹೆಜ್ಜೆಗೂ ದಲಿತರನ್ನು ಕಾಂಗ್ರೆಸ್ ತುಳಿಯುತ್ತ ಬಂದಿದೆ. ದಲಿತರ ಅಭಿವೃದ್ಧಿಗಾಗಿ ೩೪ ಸಾವಿರ ಕೋಟಿ ರೂ. ಮೀಸಲು ಇಟ್ಟಿದ್ದೇವೆ ಎಂದು ಹೇಳುತ್ತಲೇ ಅದರಲ್ಲಿನ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ನೀಡಿ ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ವಿಧಾಪ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಾದಿಗ ಮುನ್ನಡೆ ಆತ್ಮಗೌರವ ಸಮಾವೇಶದಲ್ಲಿ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಒಳಮೀಸಲಾತಿ ಬಗ್ಗೆ ಚರ್ಚಿಸಿ, ಜಾರಿಗೊಳಿಸಿ ಶೇ.೧೫ ಇದ್ದ ಎಸ್ಸಿ ಮೀಸಲಾತಿ ಶೇ.೧೭ಕ್ಕೆ ಹೆಚ್ಚಿಸಿದೆ. ಶೇ.5 ಇದ್ದ ಎಸ್‌ಟಿ ಮೀಸಲು ಶೇ.೭ಕ್ಕೆ ಹೆಚ್ಚಿಸಿ, ದಲಿತ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದೆ. ಎಸ್ಸಿ ಸಮುದಾಯದ ಭೋವಿ, ಕೊರಮ, ಕೊರಚ, ಲಮಾಣಿ ಎಡಗೈ, ಬಲಗೈ ಮಧ್ಯೆ ಬರಿಗೈ ಆಗುತ್ತಿದ್ದೇವೆ. ಎಲ್ಲ 100 ಜಾತಿ ಒಗ್ಗಟ್ಟಾಗಿ ಹೋರಾಡಬೇಕು ಎಂದರು.
ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಮಕ್ಕಳ ಮುಂದಿನ ಭವಿಷ್ಯ ರೂಪಿಸಲು ಒಳಮೀಸಲು ನೀಡಬೇಕು. ಬೊಮ್ಮಾಯಿ ಸರ್ಕಾರದ ನಿರ್ಧಾರಕ್ಕೆ ಸರ್ಕಾರ ಮುಂದುವರಿಸಬೇಕು. ಏಪ್ರಿಲ್, ಮೇನಲ್ಲಿ ನಡೆಯುವ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಶೀರ್ವದಿಸಬೇಕು. ಆಗ ಮಾತ್ರ ಒಳಮೀಸಲು ಪಡೆಯಲು ಸಾಧ್ಯವಿದೆ ಎಂದು ಹೇಳಿದರು.
ಸಾಮರಸ್ಯ ವೇದಿಕೆಯ ವಾದಿರಾಜ್ ಎಸ್ಸಿ, ಎಸ್‌ಟಿ ಒಳಮೀಸಲಾತಿ ಕುರಿತು ವಿವರ ನೀಡಿದರು. ಗೋಪಾಲ ಕಟ್ಟಿಮನಿ ಪ್ರಾಸ್ತಾವಿಕ ಮಾತನಾಡಿದರು. ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ದೇವೀಂದ್ರನಾಥ ಯಾದಗಿರಿ, ಸಾಬು ದೊಡ್ಡಮನಿ, ರಾಜು ವಾಡೇಕರ್, ಅನೀಲ ಡೊಂಗರಗಾಂವ, ರಂಜಿತ ಮೂಲಿಮನಿ, ಮಧುಕರ, ರಮೇಶ ವಾಡಕೇಕರ್, ಗೀತಾ ವಾಡೇಕರ್, ಜಯರಾಜ ಕಿಣಗಿಕರ್, ರಾಜೇಶ ವಾಡಿಕರ್​, ರಾಜು ಕಟ್ಟಿಮನಿ, ಅಭಿ ದೊಡ್ಮನಿ, ಅಂಬಾರಾಯ ಚಲಕರ, ವಿನೋದ, ಅಂಬಾರಾಯ ಅಷ್ಟಗಿ, ರವಿ ಕಂಟಿಕರ್ ಇತರರಿದ್ದರು. ಮಂಜುನಾಥ ನಾಲವಾರಕರ್ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net