

ಗದಗ: ಲಕ್ಷಾಂತರ ಕುಟುಂಬಗಳು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಬೇಕು ಎಂದು ಪೂಜ್ಯ ವೀರೇಂದ್ರ ಹೆಗ್ಗಡೆ ಅವರು ಮದ್ಯವರ್ಜನ ಕೇಂದ್ರಗಳ ಮೂಲಕ ಸಾಕಷ್ಟು ಜನರನ್ನು ವ್ಯಸನ ಮುಕ್ತರನ್ನಾಗಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗಾಂಧಿ ಜಯಂತಿ ಅಂಗವಾಗಿ ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಗಾಂಧಿಸ್ಮತಿ, ವ್ಯಸನಮುಕ್ತ ಸಾಧಕರಿಗೆ ಅಭಿನಂದನೆ ಮತ್ತು ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ 60 ಸಾವಿರ ರೂ. ನೀಡಲಾಗುತ್ತದೆ. ಹೀಗಾಗಿ ಇಡೀ ಕುಟುಂಬದ ಚಿತ್ರಣವನ್ನು ಬದಲಾವಣೆ ಮಾಡಲಾಗಿದೆ. ಮಹಿಳೆಯರು ಸಾಂಸ್ಕೃತಿಕ, ಆರ್ಥಿಕವಾಗಿ ಸಂಘಟನೆಯಾಗಿದ್ದಾರೆ. ಆಡಳಿತದ ವ್ಯವಹಾರ ಪಡೆದುಕೊಂಡಿದ್ದಾರೆ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೀಶ ಎ. ಮಾತನಾಡಿ, ಜಿಲ್ಲೆಯಲ್ಲಿ ಜನಜಾಗೃತಿ ವೇದಿಕೆಯನ್ನು 2009ರಲ್ಲಿ ಪ್ರಾರಂಭಿಸಿ ಇದುವರೆಗೂ 39 ಮದ್ಯವರ್ಜನ ಶಿಬಿರ ಏರ್ಪಡಿಸಿ 2847ಜನರನ್ನು ಮದ್ಯಮುಕ್ತರನ್ನಾಗಿ ಮಾಡಿಸಲಾಗಿದೆ ಎಂದರು.
ಜ.ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ಬಿ.ಅಸೂಟಿ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ರಾಜಣ್ಣ ಕೊರವಿ, ಕೊಪ್ಪಳದ ಪ್ರಾದೇಶಿಕ ನಿರ್ದೇಶಕ ಗಣೇಶ.ಬಿ, ಎಸ್ಪಿ ಬಿ.ಎಸ್. ನೇಮಗೌಡ, ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಶಿವಪ್ರಕಾಶ ಮಹಾಜನಶೆಟ್ಟರ, ನೂತನ ಅಧ್ಯಕ್ಷ ಶಿವಾನಂದ ಬೆಂತೂರು, ಉಪಾಧ್ಯಕ್ಷ ಚಂದ್ರಶೇಖರ ಹುಣಸಿಕಟ್ಟಿ, ಮಂಜುನಾಥ ಹದ್ದಣ್ಣವರ, ದೇವೇಂದ್ರಪ್ಪ ಕಾಗೆನವರ, ಕ್ಷೇತ್ರ ಯೋಜನಾಧಿಕಾರಿ ಸುರೇಂದ್ರ ನಾಯ್ಕ ಇದ್ದರು.
ದುಶ್ಚಟಗಳ ವಿರುದ್ಧ ನಗರದ ತೋಂಟದಾರ್ಯ ಮಠದಿಂದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಜಾಥಾವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೆ.ಎಚ್. ಪಾಟೀಲ ಸಭಾಭವನ ತಲುಪಿತು. ಜಾಥಾದಲ್ಲಿ ಮಹಿಳೆಯರಿಂದ ಪೂರ್ಣ ಕುಂಭಮೇಳ ನಡೆಯಿತು.