

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ನ ಧಾರವಾಡ ಗ್ರಾಮೀಣ ಯೋಜನಾ ಕಚೇರಿ ವತಿಯಿಂದ ತಾಲೂಕಿನ ಮನಸೂರ ಗ್ರಾಮದಲ್ಲಿ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಮಂಗಳವಾರ ಜರುಗಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಘಟಕ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತ ಮತ್ತು ಸಂಶೋಧನಾ ಕೇಂದ್ರ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ಮನಸೂರ, ನಿಗದಿ, ಮನಗುಂಡಿ, ದೇವರಹುಬ್ಬಳ್ಳಿ, ಹಳ್ಳಿಗೇರಿ ಗ್ರಾಪಂಗಳು, ನವಜೀವನ ಸಮಿತಿ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಏರ್ಪಡಿಸಿದ್ದ ಶಿಬಿರದಲ್ಲಿ ಪಾಲ್ಗೊಂಡಿದ್ದ 58 ಜನರು ಮದ್ಯ ತ್ಯಜಿಸುವ ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ರೇವಣಸಿದ್ಧೇಶ್ವರ ಮಹಾಮಠದ ಡಾ.ಬಸವರಾಜ ದೇವರು ಮಾತನಾಡಿ, ದುಶ್ಚಟಕ್ಕೆ ಸಿಲುಕಿದ ವ್ಯಕ್ತಿಯು ಮನಸ್ಸನ್ನು ಪರಿವರ್ತನೆಗೆ ಒಡ್ಡಿದರೆ ಸಮಾಜದಲ್ಲಿ ಮನ್ನಣೆ ಲಭಿಸುವುದರಲ್ಲಿ ಸಂದೇಹವಿಲ್ಲ. ಬದುಕನ್ನು ಸನ್ಮಾರ್ಗದಲ್ಲಿ ಒಯ್ಯುವುದಕ್ಕೆ ಅರಿವು ಅಗತ್ಯ. ಇದು ಸಾಧ್ಯವಾಗದ ಸಮಯದಲ್ಲಿ ಮತ್ತೊಬ್ಬರ ಮಾರ್ಗದರ್ಶನ ಪಡೆಯಬೇಕು ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜಣ್ಣ ಕೊರವಿ, ಜಿಲ್ಲಾ ಅಧ್ಯ ಸಂತೋಷ ಶೆಟ್ಟಿ, ಸದಸ್ಯರಾದ ಕರಿಯಪ್ಪ ಅಮ್ಮಿನಭಾವಿ, ಪುಂಡಲೀಕ ಹಡಪದ ಮಾತನಾಡಿದರು. ಇದೇ ಸಮಯದಲ್ಲಿ ವೇದಿಕೆ ನೂತನ ಜಿಲ್ಲಾ ಅಧ್ಯಕ್ಷ ವಸಂತ ಅರ್ಕಾಚಾರ ಅವರಿಗೆ ಸಂತೋಷ ಶೆಟ್ಟಿ ಅಧಿಕಾರ ಹಸ್ತಾಂತರಿಸಿದರು.
ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಂಕರ ಅಂಗಡಿ, ಗೌರವಾಧ್ಯಕ್ಷ ಮಲ್ಲನಗೌಡ ಗೌಡ್ರ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಪ್ರಭಾಕರ ನಾಯಕ್, ಸದಸ್ಯರಾದ ಸವಿತಾ ಅಮರಶೆಟ್ಟಿ, ಮೃತ್ಯುಂಜಯ ಸಾಲಿಮಠ, ಕಮಲಾ ಹೊಂಬಳ, ಆರತಿ ಹಿರೇಮಠ, ಇತರರು ಇದ್ದರು.
ಮಯೂರ ತೋರಸ್ಕರ್ ಸ್ವಾಗತಿಸಿದರು. ಪ್ರದಿಪ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಸಿದ್ಧಲಿಂಗಣ್ಣವರ ನಿರೂಪಿಸಿದರು. ಮಹದೇವ ವಂದಿಸಿದರು.