

ಚನ್ನರಾಯಪಟ್ಟಣ : ಪಟ್ಟಣದ ಕೋಟೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀಗುರುರಾಯರ 353 ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಬುಧವಾರ ಮಧ್ಯಾರಾಧನೆ ಭಕ್ತಿಪೂರ್ವಕವಾಗಿ ನಡೆಯಿತು.
ತಾಲೂಕಿನ ವಿವಿಧೆಡೆಗಳಿಂದ ಭಕ್ತ ಸಮೂಹ ಶ್ರೀ ಮಠಕ್ಕೆ ಅಗಮಿಸಿ ಗುರುದರ್ಶನ ಪಡೆದರು. ಮಠದಲ್ಲಿ ಅಲಂಕೃತವಾಗಿದ್ದ ಬೃಂದಾವನ ಭಕ್ತರ ಮನಸೂರೆಗೊಂಡಿತ್ತು.
ರಾಯರ 353 ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಮುಂಜಾನೆ ಮಧ್ಯಾರಾದನೆ ನಿಮಿತ್ತ ಉಷಾಃಕಾಲ ಪೂಜೆ ಪಂಚಾಮೃತ ಅಭಿಷೇಕ ಮತ್ತು ರಾಯರ ಪಾದಪೂಜೆ ಹಾಗೂ ಬೃಂದಾವನಕ್ಕೆ ಹೂ ಅಲಂಕಾರ ನೆರವೇರಿತು. ಜತೆಯಲ್ಲಿ ಅಲಂಕಾರ ಪಂಕ್ತಿಯ ಬ್ರಾಹ್ಮಣ ಪೂಜೆ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು.
ಮಧ್ಯಾರಾಧನೆಯಲ್ಲಿ ಪಾಲ್ಗೊಂಡ ಭಕ್ತಾಧಿಗಳಿಗೆ ನಿರಂತರವಾಗಿ ಸಾರ್ವಜನಿಕ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ರಾಯರ ಮಠದಲ್ಲಿ ಸಂಜೆ ಕುಮಾರಸ್ವಾಮಿ ವಗರಹಳ್ಳಿ, ಡೋಲ್ ಯೋಗಾನರಸಿಂಹ ತೆಂಗಿನಭಾಗ ಮತ್ತು ತಂಡದವರಿಂದ ಸ್ಯಾಕ್ಸೋಪೋನ್ ಜುಗಲ್‌ಬಂದಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರೀ ಮಠಕ್ಕೆ ಭಕ್ತರು ಶ್ರದ್ಧಭಕ್ತಿಪೂರ್ವಕವಾಗಿ ನಮನ ಸಲ್ಲಿಸಿ ಗುರುಗಳ ದರ್ಶನ ಪಡೆದರು.