

ಹರಪನಹಳ್ಳಿ: ಸಾಮಾಜಿಕವಾಗಿ, ಆರ್ಥಿಕವಾಗಿ ಮುನ್ನೆಲೆಗೆ ಬರಲು ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ನರಸೀಪುರ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ತೆಲಿಗಿ ಗ್ರಾಮದಲ್ಲಿ ಬುಧವಾರ ಗಂಗಾಮತ ಸಮಾಜದಿಂದ ಮಾತಾ ಗಂಗಾ ಪರಮೇಶ್ವರಿಯ ನೂತನ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗಂಗಾಮಾತೆಯನ್ನು ದೇಶದಲ್ಲಿ ಪುರಾತನ ಕಾಲದಿಂದ ಪೂಜಿಸುತ್ತಾ ಬರಲಾಗುತ್ತಿದೆ. ಗಂಗೆಗೆ ವಿಶೇಷ ಸ್ಥಾನಮಾನಗಳಿದ್ದು ಅಂತಹ ತಾಯಿಯ ಮಕ್ಕಳಾದ ನಾವು ಗಂಗೆಯು ಎಷ್ಟು ಪವಿತ್ರಳೋ ಅಷ್ಟೆ ನಮ್ಮ ಭಾವನೆಗಳು ಸುಂದರವಾಗಿರಬೇಕು. ಸಮಾಜವು ಮುಖ್ಯವಾಹಿನಿಗೆ ಬರಲು ಮೌಢ್ಯತೆಯನ್ನು ತೊರೆದು, ಪ್ರತಿ ಮನೆಯಲ್ಲಿಯೂ ಮಕ್ಕಳಿಗೆ ಗಂಡು ಹೆಣ್ಣು ಎನ್ನುವ ಅಸಡ್ಯೆ ತೋರದೆ ಶಿಕ್ಷಣವನ್ನು ನೀಡಬೇಕು.
ಮಧ್ಯಪಾನ, ಧೂಮಪಾನಗಳಿಂದ ಹಲವಾರು ಕುಟುಂಬಗಳು ಬೀದಿಗೆ ಬಂದಿವೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಗುಣಮಟ್ಟದ ಶಿಕ್ಷಣ ನೀಡಿದಾಗ ಸಮಾಜ ಮುಖ್ಯವಾಹಿನಿಗೆ ಬರಲು ಅನುಕೂಲವಾಗುತ್ತದೆ ಎಂದರು.
ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಗಂಗಾ ಮಾತೆಗೆ ಅತ್ಯಂತ ಪವಿತ್ರ ಭಾವದಿಂದ ಪೂಜೆ-ಪುನಸ್ಕಾರಗಳನ್ನು ಮಾಡಲಾಗುತ್ತದೆ. ಸ್ವಾಮಿಗಳು ವೈದ್ಯರಿದ್ದಂತೆ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜವನ್ನು ಸುಗಮ ದಾರಿಗೆ ಕೊಂಡುಯ್ಯುತ್ತಾರೆ ಎಂದರು.
ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಮಮತಾ ಮುತ್ತಿಗಿ, ಪ್ರಮುಖರಾದ ಚಕ್ರಸಾಲಿ ಪರಮೇಶ್ವರಪ್ಪ, ತಳವಾರ ಅಂಜನಪ್ಪ, ಮಹೇಶ, ಮಲ್ಲೇಶಪ್ಪ ಬಿ. ಅಂಜನಪ್ಪ ಇತರರಿದ್ದರು.