

ಹರಿಹರ: ನಗರದಲ್ಲಿ ಅ.1ರಂದು ಮಧ್ಯ ಕರ್ನಾಟಕ ಪ್ರಾದೇಶಿಕ ಕಲಾ ಉತ್ಸವ-2023 ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ತಿಕ್ ಸಾಂಸ್ಕೃತಿಕ ಸೇವಾ ಅಭಿವೃದ್ಧಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಕವಿತಾ ಮಲ್ಲಿಕಾರ್ಜುನ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ತಿಕ್ ಸಾಂಸ್ಕೃತಿಕ ಸೇವಾ ಅಭಿವೃದ್ಧಿ ಸಂಸ್ಥೆ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತ ಇಲಾಖೆ ಆಶ್ರಯದಲ್ಲಿ ನಗರದ ವಿದ್ಯಾನಗರ ಐರಣಿ ಮಠದಲ್ಲಿ ಉತ್ಸವ ಆಯೋಜನೆ ಮಾಡಲಾಗಿದೆ ಎಂದರು.
ಐರಣಿ ಮಠದ ಬಸವರಾಜ ದೇಸಿ ಕೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸುವರು. ಶಾಸಕ ಬಿ.ಪಿ. ಹರೀಶ್ ಉದ್ಘಾಟಿಸುವರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ್, ಎಸ್. ರಾಮಪ್ಪ, ಮತ್ತಿತರರು ಭಾಗವಹಿಸುವರು ಎಂದು ತಿಳಿಸಿದರು.
ಚಂದ್ರಯಾನ-3 ಯಶಸ್ವಿ ಕುರಿತಂತೆ ಎಂ. ಗುರುಸಿದ್ದಸ್ವಾಮಿ, ಕನ್ನಡ ಭಾಷೆ ಹಾಗೂ ಸಂಸ್ಕೃತಿ ಅಳಿವು ಉಳಿವು ಬಗ್ಗೆ ರೇವಣಸಿದ್ದಪ್ಪ ಅಂಗಡಿ, ಗುರು ಮತ್ತು ಗುರಿ ಬಗ್ಗೆ ನ್ಯಾಯವಾದಿ ಡಾ. ಪ್ರಭುಸ್ವಾಮಿ ಹಾಲೆವಾಡಿಮಠ, ಆಧುನಿಕತೆಯಲ್ಲಿ ಡಿಜಿಟಲ್ ಗ್ರಂಥಾಲಯದ ಮಹತ್ವ ವಿಷಯ ಕುರಿತು ಗ್ರಂಥಾಲಯದ ಉಪನಿರ್ದೇಶಕ ಪಿ.ಆರ್. ತಿಪ್ಪೇಸ್ವಾಮಿ ಉಪನ್ಯಾಸ ನೀಡಲಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯೆ ಮಂಗಳ ಗೌರಿ ಪೂಜಾರ್ ಮಾತನಾಡಿ, ಕವಿತಾ ಮಲ್ಲಿಕಾರ್ಜುನ್ ಬರೆದಿರುವ ಮಗುವಿನ ಬೆಳವಣಿಗೆ ಎಂಬ ವಿಷಯದ ಕುರಿತು ಸಹಾಯಕ ಪ್ರಾಧ್ಯಾಪಕಿ ಡಾ. ಶ್ವೇತಾ ಈಶ್ವರ್ ವಿಮರ್ಶೆ ಮಾಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಮಂಜುಳಾ ಕೃಷ್ಣಮೂರ್ತಿ, ನೀಲಾಂಬಿಕಾ ದೇವಿ, ಮಮತಾ ಬೆಲ್ಲದ್, ಪುಷ್ಪಾ ಇತರರಿದ್ದರು.