

ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಹಾಗೂ ರಾಘವೇಂದ್ರ ಸ್ವಾಮಿಗಳ ದೇವಳದಲ್ಲಿ ಆಚಾರ್ಯ ಶ್ರೀಮಧ್ವಾಚಾರ್ಯರ ಕಾಷ್ಟಶಿಲ್ಪವನ್ನು ಭಂಡಾರಕೆರೆ ಸ್ವಾಮೀಜಿ ಶ್ರೀವಿದ್ಯೇಶತೀರ್ಥ ಶ್ರೀಪಾದಂಗಳವರು ಅನಾವರಣಗೊಳಿಸಿದರು.
ಯಲ್ಲಾಪುರದ ರಥಶಿಲ್ಪಿಯಾಗಿರುವ ಸಂತೋಷ ಗುಡಿಗಾರ ಅವರು ಶಿವನೇ ಮರದಲ್ಲಿ ಅಂದಾಜು ಮೂರುವರೆ ಅಡಿ ಎತ್ತರವಿರುವ ಆಚಾರ್ಯ ಮಧ್ವರ ಮೂರ್ತಿಯನ್ನು ರಚಿಸಿದ್ದು ಮನೋಹರವಾಗಿ ಕಂಗೊಳಿಸುತ್ತಿದೆ. ಭಂಡಾರಕೆರೆ ಮಠದ ಶ್ರೀಗಳು ಈ ಕಾಷ್ಟಶಿಲ್ಪವನ್ನು ಅನಾವರಣಗೊಳಿಸಿ, ಮಧ್ವಮತದ ಹರಿಕಾರರಾಗಿರುವ ಆಚಾರ್ಯರ ಮೂರ್ತಿ ಕೆತ್ತನೆಯ ಬಗ್ಗೆ ಗುಣಗಾನ ಮಾಡಿದರು.
ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ, ಉಪಾಧ್ಯಕ್ಷ ಅನಂತರಾಜ ಭಟ್, ಶ್ರೀಕಾಂತ ಕೆಮ್ತೂರು, ವಾದಿರಾಜ ಭಟ್, ಕೃಷ್ಣರಾಜ ಕೆಮ್ತೂರು, ದಯಾನಂದರಾವ್, ರಾಘವೇಂದ್ರ ಯಡನೀರು, ಅನಂತಕೃಷ್ಣ ಐತಾಳ, ಅರ್ಚಕರು ಮತ್ತು ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.
ಚಾತುರ್ಮಾಸ್ಯ ಆರಂಭದ ಮುನ್ನಾ ದಿನ ಶ್ರೀಕೃಷ್ಣನಿಗೆ ವಿಶೇಷವಾಗಿ ಎಳನೀರು ಅಭಿಷೇಕವನ್ನು ಭಕ್ತರ ಸಮ್ಮುಖದಲ್ಲಿ ಭಂಡಾರಕೆರೆ ಮಠದ ಶ್ರೀಗಳು ನೆರವೇರಿಸಿದರು. ಮರುದಿನ ಆಷಾಢ ಏಕಾದಶ ನಿಮಿತ್ತ ಬೆಳಗ್ಗೆ ಭಕ್ತರಿಗೆ ಶ್ರೀಹರಿ ಚಿನ್ಹೆಗಳಾದ ಸುದರ್ಶನ ಮತ್ತು ಶಂಖದ ಮುದ್ರೆಗಳನ್ನು ನೀಡಿದರು. ಸ್ವತಃ ಮುದ್ರೆಗಳನ್ನು ಧಾರಣ ಮಾಡಿಕೊಂಡರು.
ಆಸ್ಥಾನದೇವರ ಪೂಜೆ ನೆರವೇರಿಸಲಾಯಿತು. ಭಾಗವತ ಏಕಾದಶಿ ನಿಮಿತ್ತ ಭಾಗವತ ಪ್ರವಚನದಲ್ಲಿ ಆಶೀರ್ವಚನ ನೀಡಿ, ಶ್ರೀಮದ್ಭಾಗವತವನ್ನು ಕೇವಲ ಶ್ರವಣ ಮಾಡುವದರಿಂದಲೇ ಅನಂತ ಕೋಟಿ ಜನ್ಮದ ಪಾಪಗಳು ಪರಿಹಾರವಾಗುತ್ತವೆ. ಇಹದಲ್ಲಿ ಇದೊಂದು ಜೀವನ ನಡೆಸುವ ಜೀವನ ವಿಧಾನವನ್ನು ಹೇಳುತ್ತದೆ. ಮನಸ್ಸು ಮತ್ತು ಸುತ್ತಲಿನ ಪರಿಸರದ ಬಗ್ಗೆ ಜ್ಞಾನವನ್ನೀಯುವ ಭಾಗವತವು ಶ್ರೀಹರಿಯ ಪಾರಮ್ಯವನ್ನು ಎತ್ತಿ ಸಾರುತ್ತದೆ. ಇಂಥ ಭಾಗವತವೂ ಭಾರತದ ಮನೆ ಮನೆಗಳಲ್ಲಿ ನಿತ್ಯಶ್ರವಣವಾಗಬೇಕು ಎಂದು ಹೇಳಿದರು.
ಮರುದಿನ ಮತ್ತೆ ಶ್ರೀಮಠದ ಉಪಾಸನಾ ಮೂರ್ತಿಯ ಪೂಜೆ, ಶ್ರೀ ಕೃಷ್ಣ ಹಾಗೂ ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ವಿಶೇಷ ಅಭಿಷೇಕ ಮತ್ತು ಪೂಜೆ ನಡೆದವು.