

ವಿಜಯವಾಣಿ ಸುದ್ದಿಜಾಲ ಉಡುಪಿ
ಶ್ರೀ ಮಧ್ವಾಚಾರ್ಯರ ತತ್ವ ಸಂದೇಶದ ಅನುಸರಿಸಿದರೆ ಮೋಕ್ಷ ಲಭಿಸುತ್ತದಲ್ಲದೆ, ಸಂಸಾರ ಬಂಧನದಿಂದ ಹೊರ ಬರಲು ಸಾಧ್ಯ. ಲೌಕಿಕ-ಭೌತಿಕ ವಿಚಾರದ ಜೀವನವೇ ಶ್ರೇಷ್ಠವೆಂದು ಎಲ್ಲರೂ ಭಾವಿಸಿಕೊಂಡಿದ್ದು, ಅದು ಅಂತಿಮ ಸತ್ಯವಲ್ಲ. ಆಧ್ಯಾತ್ಮಿಕತೆಯೇ ಜೀವನದ ಅಂತಿಮ ಸತ್ಯ. ಮಕ್ಕಳಲ್ಲಿ ಭೌತಿಕ ಪ್ರಜ್ಞೆಯ ಬದಲು ಆಧ್ಯಾತ್ಮಿಕ ಪ್ರಜ್ಞೆ ಬೆಳೆಸಿದರೆ ಅವರ ಭವಿಷ್ಯ ಉಜ್ವಲವಾಗಲಿದೆ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಮಧ್ವಾಚಾರ್ಯರು ವಾಯುದೇವರ ಅವತಾರವೇ ಆಗಿದ್ದಾರೆ. ಭಗವಂತನ ಆರಾಧನೆಗಾಗಿ ಮೂರು ಅವತಾರ ಮೀಸಲಿಡಲಾಗಿದೆ. ಬ್ರಹ್ಮಚಾರಿಯಾಗಿ ಹನುಮಂತನಿಂದ ಶ್ರೀರಾಮನ ಸೇವೆ, ಸಂಸಾರಿ(ಗ್ರಹಸ್ಥ), ವಾನಪ್ರಸ್ಥನಾಗಿ ಭೀಮಸೇನನಿಂದ ಶ್ರೀಕೃಷ್ಣನ ಸೇವೆ, ಸನ್ಯಾಸಿಯಾಗಿ ಶ್ರೀಮಧ್ವಾಚಾರ್ಯರಿಂದ ವೇದವ್ಯಾಸ ದೇವರ ಸೇವೆ ನಡೆದಿದೆ. ಹೀಗೆ ಸರ್ವ ಆಶ್ರಮಗಳ ಮೂಲಕ ಭಗವಂತನ ಸೇವೆ ಮಾಡಲು ವಾಯುದೇವರು ಮೂರು ಅವತಾರ ಎತ್ತಿದ್ದರು ಎಂದರು.
ಖ್ಯಾತ ಪ್ರವಚನಕಾರ, ವಿದ್ವಾಂಸ ವ್ಯಾಸನಕೆರೆಯ ಡಾ. ಪ್ರಭಂಜನ ಆಚಾರ್ಯ ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಲಾಯಿತು. ಚಿಪ್ಪಿಗಿರಿ ನಾಗೇಂದ್ರ ಆಚಾರ್ಯ ಅವರಿಗೆ ನೀಡಿದ ಮರಣೋತ್ತರ ಪ್ರಶಸ್ತಿಯನ್ನು ಅವರ ಪುತ್ರ ಕೃಷ್ಣ ಆಚಾರ್ಯ ಸ್ವೀಕರಿಸಿದರು.
ಮಧ್ವಾಚಾರ್ಯರು ಎಡ-ಬಲ ಪಂಥದವರಲ್ಲ, ವಾಮಪಂಥದವರೂ ಅಲ್ಲ. ಅವರು ನಡು ಪಂಥದವರು. ಎಲ್ಲರನ್ನೂ ಸಮತೋಲನದಿಂದ ಮುಂದೆ ಸಾಗಿಸುವುದು ಅವರ ತತ್ತ್ವ. ಆಚಾರ್ಯರು ಮಧ್ಯಗೇಹ ಭಟ್ಟರ ಪುತ್ರರು. ಅಂದರೆ ಮಧ್ಯದ ಮನೆಯವರು. ಆಚೆ ಮನೆಯವರಲ್ಲ, ಈಚೆ ಮನೆಯವರಲ್ಲ. ಅವರು ನಡು ಮನೆಯವರು. ಹೀಗಾಗಿ ನಡು ಪಂಥದವರು. ಅವರ ಸಂದೇಶ ಅನುಸರಣೆಯಿಂದ ಲೋಕಕ್ಕೆ ಒಳಿತಾಗಲಿದೆ. ಇಂದು ಸಿದ್ಧಾಂತಗಳ ಕೊರತೆಯಿಲ್ಲ. ಅದರ ಕುರಿತಾದ ಹಸಿವಿನ ಹಾಗೂ ಜಿಜ್ಞಾಸುಗಳ ಕೊರತೆಯಿದೆ. ಹೀಗಾಗಿ ಎಲ್ಲ ವೇದಾಂತಿಗಳು ಜನರಲ್ಲಿ ಆಧ್ಯಾತ್ಮಿಕ ಆಸಕ್ತಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಪುತ್ತಿಗೆ ಶ್ರೀ ಕರೆ ನೀಡಿದರು.