ಮೈಸೂರಿನಲ್ಲಿ ಮಧ್ವ ನವಮಿ ಅದ್ದೂರಿ ಉತ್ಸವ

M 2
Published on

ಮೈಸೂರು: ದ್ವೈತ ಸಿದ್ಧಾಂತ ಪ್ರತಿಪಾದಕ ಶ್ರೀಮನ್ ಮಧ್ವಾಚಾರ್ಯರು ಬದರಿಕಾಶ್ರಮವನ್ನು ಪ್ರವೇಶಿಸಿದ ದಿನದ ಸ್ಮರಣೆಗಾಗಿ ನಗರದಲ್ಲಿ ಮಧ್ವ ನವಮಿ ಉತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಅಗ್ರಹಾರದ ಉತ್ತರಾದಿ ಮಠದಲ್ಲಿ ಭಾನುವಾರ ಬೆಳಗ್ಗೆ ಶ್ರೀಮಧ್ವಾಚಾರ್ಯರ ಪ್ರತಿಮೆಗೆ ವಾಯುಸ್ತುತಿ ಪುನಶ್ಚರಣ ಸಹಿತ ಜೇತುತುಪ್ಪ ಅಭಿಷೇಕ, ಪಂಡಿತರಿಂದ ಉಪನ್ಯಾಸ, ಮಧ್ವರ ಗ್ರಂಥಗಳ ಪಲ್ಲಕ್ಕಿ ಉತ್ಸವ, ವಿಶೇಷ ಪೂಜೆ, ಶ್ರೀಧನ್ವಂತರಿ ದೇವರಿಗೆ ಮತ್ತು ಶ್ರೀ ಸತ್ಯಸಂಕಲ್ಪ, ಶ್ರೀಸತ್ಯ ಸಂತುಷ್ಟ ತೀರ್ಥರ ವೃಂದಾವನಗಳಿಗೆ ಅಭಿಷೇಕ ನೆರವೇರಿತು. ಪಂಡಿತರಾದ ಗೋವಿಂದಾಚಾರ್ಯ, ಅನಿರುದ್ಧಾಚಾರ್ಯ, ಭಾರ್ಗವಾಚಾರ್ಯ ಪಾಂಡುರಂಗಿ ಅವರು ಧಾರ್ಮಿಕ ವಿಧಿ ಮತ್ತು ಪಾರಾಯಣದ ನೇತೃತ್ವ ವಹಿಸಿದ್ದರು. ನಂತರ ಸಾವಿರಾರು ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗವಾಯಿತು.
ಚಾಮರಾಜ ಜೋಡಿ ರಸ್ತೆಯ ವೆಂಕಟಾಚಲ ಧಾಮದಲ್ಲಿ ಶ್ರೀನಿವಾಸ ದೇವರ ಸನ್ನಿಧಿಯಲ್ಲಿ ಬೆಳಗ್ಗಿನಿಂದಲೇ ದೇವರಿಗೆ ವಿಶೇಷ ಕಲಶ ಪೂಜೆ, ಅಭಿಷೇಕ, ಪವಮಾನ ಹೋಮ, ಮಧ್ವಾಚಾರ್ಯರ ಪ್ರತಿಮೆ ಮತ್ತು ಗ್ರಂಥಗಳ ರಥೋತ್ಸವ, ರಾಯರ ವೃಂದಾವನಕ್ಕೆ ವಿಶೇಷ ಅಲಂಕಾರ ನೆರವೇರಿತು. ವಿದ್ವಾನ್ ಕೃಷ್ಣಕುಮಾರ ಆಚಾರ್ಯರ ನೇತೃತ್ವದಲ್ಲಿ ಪವಮಾನ ಹೋಮದ ಪೂರ್ಣಾಹುತಿ, ಪ್ರಧಾನ ಅರ್ಚಕ ರಾಘವೇಂದ್ರಾಚಾರ್ಯರ ಆಚಾರ್ಯತ್ವದಲ್ಲಿ ಪೂಜೆ ಸಂಪನ್ನಗೊಂಡಿತು.
ವ್ಯಾಸತೀರ್ಥ ವಿದ್ಯಾಪೀಠ: ಕೃಷ್ಣಮೂರ್ತಿ ಪುರಂನ ಸೋಸಲೆ ವ್ಯಾಸರಾಜರ ಮಠದ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಮಧ್ವ ನವಮಿ ಉತ್ಸವಕ್ಕಾಗಿ ವಿದ್ಯಾರ್ಥಿಗಳಾದ ಸರ್ವಜ್ಞ ಮತ್ತು ಶ್ರೀಹರಿ ಅವರು ಭೇದೋಜ್ಜೀವನ ಗ್ರಂಥದ ಅನುವಾದ ಮತ್ತು ಪರೀಕ್ಷೆ ನೀಡಿ ವಿದ್ವಾಂಸರಿಂದ ಸೈ ಎನಿಸಿಕೊಂಡರು. ವಾಕ್ಯಾರ್ಥ ಸಭೆಯಲ್ಲಿ ಗೋಪಾಲ ಮಾಳಗಿ ವಿಷಯ ಮಂಡಿಸಿದರು.
ನಂತರ ವಿದ್ವಾಂಸರಾದ ಶ್ರೀನಿವಾಸ ಕೊರ್ಲಹಳ್ಳಿ (ಮಧ್ವಾಚಾರ್ಯರ ಬಾಲ್ಯ), ಅಖಿಲೇಶ ಆಚಾರ್ಯ (ಮಧ್ವರು ಸಂದರ್ಶಿಸಿದ ತೀರ್ಥಕ್ಷೇತ್ರಗಳು), ಕೃಷ್ಣಾಚಾರ್ಯ ನಾಗಸಂಪಿಗೆ (ಸುಮಧ್ವವಿಜಯ ಪಾರಾಯಣ ಮಹಿಮೆ), ಬಿದರಹಳ್ಳಿ ಕೃಷ್ಣಾಚಾರ್ಯ (ಮಧ್ವರ ಗ್ರಂಥಗಳಲ್ಲಿ ನಿತ್ಯಾನುಷ್ಠಾನ ನಿರ್ಣಯ) ಮತ್ತು ಶ್ರೀನಿವಾಸಮೂರ್ತಿ ಆಚಾರ್ಯ (ತತ್ವವಾದದ ವ್ಯವಹಾರಿಕ ದೃಷ್ಟಿ) ಕುರಿತು ವಿಶೇಷ ಪ್ರವಚನ ನೀಡಿದರು.
ವ್ಯಾಸರಾಜ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಜೆ ವಿದ್ವಾನ್ ಸುಮುಖ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ರಂಜನೆ ನೀಡಿತು. ವಿವಿಧ ಮಾಧ್ವ ಮಠ, ಮಂದಿರದಲ್ಲೂ ಮಧ್ವ ನವಮಿ ಅಂಗವಾಗಿ ಪಾರಾಯಣ, ಪ್ರವಚನ, ಅನ್ನದಾನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net