

ಕೆ.ಆರ್.ನಗರ: ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಿ ಸೂಕ್ತ ಪರಿಹಾರ ಕೊಡಿಸಿದ ನಂತರ ಮಧುವನಹಳ್ಳಿ ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಡಿ.ರವಿಶಂಕರ್ ಭರವಸೆ ನೀಡಿದರು.
ಪಟ್ಟಣದ ಮಧುವನಹಳ್ಳಿ ಬಡಾವಣೆಯಲ್ಲಿ ಸೋಮವಾರ ಸಂಜೆ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಮುಂದುವರಿದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಮತ್ತು ಮಧುವನಹಳ್ಳಿ ರಸ್ತೆ ಅಭಿವೃದ್ಧಿ ಬಗ್ಗೆ ಸಮಾಲೋಜನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಲೋಕೋಪಯೋಗಿ ಇಲಾಖೆ ವತಿಯಿಂದ ಪಟ್ಟಣದಿಂದ ಹೊಸಕೋಟೆ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಿದ್ದಾರೆ ಎಂದರು.
ಸಚಿವರು ಕಾಮಗಾರಿಯ ಭೂಮಿಪೂಜೆ ನೆರವೇರಿಸಲು ಬಂದ ಸಂದರ್ಭದಲ್ಲಿ ಮಧುವನಹಳ್ಳಿ ಬಡಾವಣೆಯ ನಿವಾಸಿಗಳು ರಸ್ತೆ ವಿಸ್ತರಣೆ ಮಾಡಿ ಅನುಕೂಲ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರು. ಇದರಿಂದ ಇಲಾಖಾ ಅಧಿಕಾರಿಗಳು ಕ್ರಿಯಾಯೋಜನೆ ಸಿದ್ಧಪಡಿಸಿ ಚುತುಷ್ಪಥ ರಸ್ತೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಈ ರಸ್ತೆ ನಿರ್ಮಾಣ ಮಾಡಲು ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ. ಪಟ್ಟಣದ ಚೀರ‌್ನಹಳ್ಳಿ ರಸ್ತೆ ತಿರುವುನಿಂದ ಬೀರನಹಳ್ಳಿ ರಸ್ತೆ ತಿರುವುವರೆಗೆ ಮನೆಗಳು ಮತ್ತು ನಿವೇಶಗಳು ಸೇರಿ ಒಟ್ಟು 179 ಜನರ ಆಸ್ತಿಗಳು ಭೂಸ್ವಾಧೀನಕ್ಕೆ ಒಳಪಡಲಿದೆ. ಈ ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ಕಾರದಿಂದ 12.50 ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಿದರು.
ಕಾಮಗಾರಿ ಆರಂಭಗೊಂಡ ನಂತರ ಮಧುವನಹಳ್ಳಿ ಬಡಾವಣೆಯ ಬಲಭಾಗದಲ್ಲಿ 84, ಎಡಭಾಗದಲ್ಲಿ 113 ಮನೆಗಳು ಮತ್ತು ನಿವೇಶನಗಳನ್ನು ತೆರವು ಮಾಡಿ ರಸ್ತೆ ವಿಸ್ತರಣೆ ಮಾಡಲಾಗುತ್ತದೆ. ಆದ್ದರಿಂದ ನಾಗರಿಕರು ಸಹಕಾರ ನೀಡಬೇಕು. ಇದಕ್ಕೆ ಸೂಕ್ತ ಪರಿಹಾರ ಕೊಡಿಸಲಾಗುತ್ತದೆ ಎಂದು ಭರವಸೆ ನೀಡಿದ ಶಾಸಕರು ದಾಖಲೆ ಸರಿ ಇಲ್ಲದವರಿಗೆ ವಿಶೇಷ ಪ್ರಕರಣದಡಿ ದಾಖಲೆ ಮಾಡಿಸಿ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುತ್ತದೆ ಎಂದು ಹೇಳಿದರು.
ರಸ್ತೆ ವಿಸ್ತರಣೆಯಿಂದ ಬಡಾವಣೆಯ ಸೌಂದರ್ಯ ಹೆಚ್ಚಾಗಲಿದ್ದು ಆರ್ಥಿಕ ವ್ಯವಹಾರವೂ ದುಪ್ಪಟ್ಟಾಗಲಿದೆ. ಆದ್ದರಿಂದ ಬಡಾವಣೆಯ ನಿವಾಸಿಗಳು ಕಾಮಗಾರಿ ಆರಂಭಿಸಲು ಸಹಕಾರ ನೀಡಬೇಕು ಎಂದು ಕೋರಿದರು.
ಗ್ರಾಮದ ವೀರಭದ್ರೇಶ್ವರಸ್ವಾಮಿ ದೇವಾಲಯದ ಮುಂದುವರಿದ ಕಾಮಗಾರಿಗಾಗಿ 10 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದ್ದು, ಮುಂದಿನ ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಿ ದೇವಾಲಯದ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಹಬ್ಬ ಆಚರಣೆಗೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು.
ನಗರ ಯೋಜನಾ ಪ್ರಾಧಿಕಾರದ ವತಿಯಿಂದ ಮಧವನಹಳ್ಳಿ ಬಡಾವಣೆಯ ಕೆರೆ ಅಭಿವೃದ್ಧಿಪಡಿಸಲು 50 ಲಕ್ಷ ರೂ. ಅನುದಾನ ಬಿಡುಗಡೆಯಾಗಲಿದ್ದು, ಸ್ಮಶಾನ ಅಭಿವೃದ್ಧಿಗೆ 20 ಲಕ್ಷ, ಪಾರ್ಕ್ ಅಭಿವೃದ್ಧಿಗೆ 5 ಲಕ್ಷ ರೂ. ಅನುದಾನ ನೀಡಲಾಗಿದೆ. ಈ ಭಾಗದ ಮುಖಂಡರು ಕಾಮಗಾರಿಗಳನ್ನು ಗುಣಮಟ್ಟದಿಂದ ಕೂಡಿರುವಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಪುರಸಭಾ ಅಧ್ಯಕ್ಷ ಶಿವುನಾಯಕ್, ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಸದಸ್ಯರಾದ ನಟರಾಜು, ಶಂಕರ್‌ಸ್ವಾಮಿ, ಮಾಜಿ ಸದಸ್ಯರಾದ ವಿಜಯಕುಮಾರ್, ವಿನಯ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಮುಖಂಡರಾದ ನಾಗರಾಜನಾಯಕ, ಎಂ.ಎಸ್.ರವಿಕುಮಾರ್, ಲೋಕೇಶ್, ಆದರ್ಶ, ಕಾಳಿಕುಮಾರ್, ಕೇಶವ್, ಕುಮಾರ್, ಎಂ.ಲೋಕೇಶ್, ಶಿವಣ್ಣ, ಪ್ರಕಾಶ್, ಎಂ.ಎಸ್.ನಂಜುಂಡಸ್ವಾಮಿ, ವೆಂಕಟೇಶ್, ನಾಗೇಂದ್ರ, ರವಿಪೂಜಾರಿ ಇದ್ದರು.