

ಚಿಕ್ಕನಾಯಕನಹಳ್ಳಿ: ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಬರುವ ಬಡ ಹೆಣ್ಣುಮಕ್ಕಳನ್ನು 30 ಪರ್ಸೆಂಟ್ ಕಮಿಷನ್ ಆಸೆಗೆ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತ್ರೈವಾಸಿಕ ಕೆಡಿಪಿ ಸಭೆಯಲ್ಲಿ ವೈದ್ಯಾಧಿಕಾರಿ ಬೆವರಿಳಿಸಿದರು.
ಶನಿವಾರ ಪಟ್ಟಣದ ತೀನಂಶ್ರೀ ಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಶಿಶು ಮರಣ ಪ್ರವಾಣ ಹೆಚ್ಚಾಗಿದ್ದರೂ ತಾಲೂಕು ವೈದ್ಯಾಧಿಕಾರಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕೆಂಡಾಮಂಡಲರಾದರು.
ಆರೋಗ್ಯ ಇಲಾಖೆ ಅಧಿಕಾರಿಗಳು ಬಡವರ ರಕ್ತ ಹೀರುತ್ತಿದ್ದಾರೆ, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದರಿಂದ ಉದ್ದೇಶಿತ ತಾಯಿ-ಮಗು ಆಸ್ಪತ್ರೆ ಮಂಜೂರಾತಿ ತಡವಾಗಿದೆ, ಹಣದಾಸೆಯ ವೈದ್ಯರನ್ನು ಮನೆಗೆ ಕಳುಹಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
50 ಹಾಸಿಗೆಯುಳ್ಳ ಸರ್ಕಾರಿ ಆಸ್ಪತ್ರೆಯಲ್ಲಿ 5 ಜನ ವೈದ್ಯರಿದ್ದರೂ, ಸ್ಕಾೃನಿಂಗ್ ಹಾಗೂ ಇತರ ಪರೀಕ್ಷೆಗಳಿಗೆ ತಿಪಟೂರು, ತುಮಕೂರಿನ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತಾರೆ, ತಪ್ಪು ತಿದ್ದಿಕೊಳ್ಳಿ ಎಂದು ಟಿಎಚ್‌ಒ ರವಿಕುವಾರ್‌ಗೆ ತಾಕೀತು ಮಾಡಿದರು.
ಪ್ರಧಾನಮಂತ್ರಿ ಜಲಜೀವನ್ ಯೋಜನೆಯಡಿ ತಾಲೂಕಿನಲ್ಲಿ 5600 ಮನೆ ಗುರುತಿಸಲಾಗಿದ್ದು, ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿ ರಮೇಶ್ ಎಂದರು. ಆಲದಕಟ್ಟೆ ಬಳಿ ಉಪಸ್ಥಾಪವರಕ್ಕೆ ಅಗತ್ಯವಾದ 50ಎಕರೆ ಜಾಗದ ಕೊರತೆ ಇದೆ. ಆದ್ದರಿಂದ ಯೋಜನೆ ಬದಲಾಯಿಸಿಕೊಳ್ಳಬೇಕು ಎಂದು ಸೂಚಿಸಿದರು.
ತಾಪಂ ಅಧ್ಯಕ್ಷೆ ಚೇತನಾ, ತಹಸೀಲ್ದಾರ್ ತೇಜಸ್ವಿನಿ, ಇಒ ಅಥಿಕ್‌ಪಾಷ, ವೈದ್ಯಾಧಿಕಾರಿ ಕುವಾರಸ್ವಾಮಿ, ಡಿವೈಎಸ್‌ಪಿ ಚಂದನ್‌ಕುವಾರ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ನಿವೇಶನರಹಿತರಿಗೆ ಜಾಗ ನೀಡಿ: ನಿವೇಶನ ಬಯಸಿ ಅರ್ಜಿ ಸಲ್ಲಿಸಿರುವ 9332 ಜನರಿಗೆ ಜಾಗ ನೀಡಬೇಕು, ವಿಜಲ್(ವಸತಿ ವೀಕ್ಷಣೆ) ಆ್ಯಪ್‌ನಲ್ಲಿ 900 ಮನೆಗಳ ಸರಿಯಾದ ದಾಖಲೆಗಳು ಇಲ್ಲ, 172 ಮನೆಗಳನ್ನು ದಾಖಲೆ ಇಲ್ಲದೇ ರದ್ದಾಗಿದೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಜಿಪಂ ಸದಸ್ಯರಿಂದ ಸಭೆ ಬಹಿಷ್ಕಾರ: ತಾಲೂಕು ಆಡಳಿತ ಶಿಷ್ಟಾಚಾರ ಪಾಲಿಸುತ್ತಿಲ್ಲ ಎಂದು ದೂರಿ ಜಿಪಂ ಸದಸ್ಯರಾದ ಕಲ್ಲೇಶ್, ರಾಮಚಂದ್ರಯ್ಯ, ಹಾಗೂ ವೈ.ಸಿ.ಸಿದ್ದರಾಮಯ್ಯ ತಾಪಂ ಪ್ರಗತಿ ಪರಿಶೀಲನಾ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು, ಇದಕ್ಕೆ ತಲೆಕೆಡಿಸಿಕೊಳ್ಳದ ಸಚಿವರು ಸಭೆಯನ್ನು ಮುಂದುವರಿಸಿದರು.