ನೀರು ದುರ್ಬಳಕೆ ಮಾಡಿಕೊಂಡರೆ ಕ್ರಮ ತೆಗೆದುಕೊಳ್ಳುವುದಾಗಿ ಮಾಧುಸ್ವಾಮಿ ಎಚ್ಚರಿಕೆ

State 3 Madhuswamy
Published on

ಬೆಂಗಳೂರು: ಕೆ.ಸಿ. ವ್ಯಾಲಿ ನೀರು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಕಾನೂನು ಸಚಿವ ಮಾಧುಸ್ವಾಮಿ ಎಚ್ಚರಿಸಿದ್ದಾರೆ.

ವಿಧಾನಸಭೆಯಲ್ಲಿ ಮಂಗಳವಾರ ಕಾಂಗ್ರೆಸ್​ನ ರಮೇಶ್​ಕುಮಾರ್, ಕೃಷ್ಣಬೈರೇಗೌಡ ಮತ್ತಿತರರ ಪ್ರಶ್ನೆಗೆ ಉತ್ತರಿಸಿದರು. ನೀರು ಎತ್ತುವಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದೆ. ಆದರೆ, ರೈತರ ವಿರುದ್ಧ ಕ್ರಮ ಎಂಬ ಆರೋಪ ಬರಬಹುದೆಂದು ಸುಮ್ಮನಾದೆ.

ಮಾ. 21ರಂದು ಡಿಸಿ ಜತೆ ಸಭೆ ನಿಗದಿ ಮಾಡಿದ್ದೇನೆ. ನಿಮ್ಮೆಲ್ಲರ ಅಭಿಪ್ರಾಯ ಕೇಳಿದ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವೆ ಎಂದರು. ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕುಡಿಯಲು ಅಥವಾ ಕೃಷಿಗೆ ಕೊಡುವಂತಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್ ನಿರ್ದೇಶನವಿದೆ. ಕೆರೆಗಳ ತುಂಬಿಸಿ ಇನ್ನೊಂದು ಹಂತದ ಫಿಲ್ಟರ್ ಆದ ಬಳಿಕ ಕೊಡಬೇಕು ಎಂದರು. ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೆರೆ ಭರ್ತಿಗೆ ಬಳಸುತ್ತಿರುವುದು ಉತ್ತಮ ಯೋಜನೆ. ಆದರೆ, ಈ ನೀರು ಬಹಳಷ್ಟು ಕೆರೆಗಳನ್ನು ತಲುಪಿಲ್ಲ. ಹೊಸ ಕೆರೆಗಳು ನೀರು ಯಥೇಚ್ಛ ಕುಡಿಯಲಿದ್ದು, ಕೆರೆಗಳ ಭರ್ತಿ ಸುಲಭವಲ್ಲ ಎಂದು ಹೇಳಿದರು. ಕೆ.ಸಿ. ವ್ಯಾಲಿ ಯೋಜನೆಯಿಂದ 440 ಎಂಎಲ್​ಡಿ ನೀರು ಕೊಡಬೇಕಿತ್ತು. ಆದರೆ, ಅಷ್ಟು ಪ್ರಮಾಣದ ನೀರು ಹರಿದಿಲ್ಲ. ಶೀಘ್ರವೇ ನಿಗದಿತ ಪ್ರಮಾಣದ ನೀರು ಕೊಡಲು ಸರ್ಕಾರ ಬದ್ಧವಾಗಿದೆ ಎಂದರು.

ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಕೆ.ಸಿ. ವ್ಯಾಲಿ ಯೋಜನೆ ಆರಂಭಿಕ ಹಂತವೇ ತಮ್ಮ ಕ್ಷೇತ್ರವಾಗಿದ್ದರೂ ಹೊಸಕೋಟೆಯಲ್ಲಿ ಒಂದು ಕೆರೆಯೂ ತುಂಬಿಲ್ಲ. ನೀರು ಎತ್ತುವಳಿ ಮಾಡುವವರ ತಡೆಯಿರಿ ಎಂದು ಆಗ್ರಹಿಸಿದರು. ಮಧ್ಯಪ್ರವೇಶಿಸಿ ಮಾತನಾಡಿದ ಸಚಿವ ನಾಗೇಶ್, ಜಲಮಂಡಳಿಯವರದ್ದು ಇದರಲ್ಲಿ ತಪ್ಪಿದೆ. ಪೈಪ್​ಲೈನ್​ನಲ್ಲಿ ಲೀಕೇಜ್ ಇದ್ದರೂ ಜಲಮಂಡಳಿ ಕ್ರಮ ವಹಿಸಿಲ್ಲ. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುತ್ತೇವೆ ಎಂದರು.

ಭಾವುಕರಾದ ರಮೇಶ್​ಕುಮಾರ್: ಕೆ.ಸಿ.ವ್ಯಾಲಿ ಯೋಜನೆ ದುರ್ಬಳಕೆ ಆಗುತ್ತಿದೆ ಎಂದು ರಮೇಶ್​ಕುಮಾರ್ ದೂರಿದರು. ಒಂದು ಹಂತಕ್ಕೆ ನೀರು ಮಾತ್ರ ಬರುತ್ತದೆ. ಬೆರಳೆಣಿಕೆಯಷ್ಟು ಜನ ದುರ್ಬಳಕೆ ಮಾಡುತ್ತಿದ್ದಾರೆ. ತಮಗೆ ಬೇಕಾದಂತೆ ನೀರನ್ನು ಹರಿಸಿಕೊಳ್ಳುತ್ತಿದ್ದಾರೆ. ಒಂದೊಂದು ಕಾಲುವೆ ತೋಡಿ ಆರೇಳು ಪೈಪ್ ಅಳವಡಿಸಿಕೊಂಡು ಕೃಷಿಗೆ ನೀರು ಬಳಸಿಕೊಳ್ಳುತ್ತಿದ್ದಾರೆ. ನೂರಾರು ಕೋಟಿ ರೂ.ಗಳ ಮಹತ್ವಾಕಾಂಕ್ಷಿ ಯೋಜನೆ ಹಾಳಾಗುತ್ತಿದೆ ಎಂದು ಭಾವುಕರಾದರು. ಕೆ.ಸಿ. ವ್ಯಾಲಿ ಯೋಜನೆಗೆ 1,350 ಕೋಟಿ ರೂ ವೆಚ್ಚ ಮಾಡಲಾಗಿದೆ. ಆರಂಭಿಕ ತಾಲೂಕುಗಳ ರೈತರು ನೀರು ಎತ್ತುವಳಿ ಮಾಡುತ್ತಿದ್ದಾರೆ. ನಮ್ಮ ತಾಲೂಕಿಗೆ ನೀರು ಇನ್ನೂ ಬಂದಿಲ್ಲ, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸತ್ತು ಹೋಗಿದೆ ಎಂದು ಮಾತನಾಡುವುದು ತಪ್ಪು, ಆದರೂ ಹಾಗೆ ಮಾತಾಡುವ ಸ್ಥಿತಿ ಬಂದಿದೆ ಎಂದರು. ಕೆ.ಸಿ. ವ್ಯಾಲಿಯಿಂದ ಇಂದಿನವರೆಗೂ ಜಲಘಟ್ಟ ಎಂಬ ಒಂದು ಕೆರೆಯೇ ತುಂಬಿಲ್ಲ. ಶ್ರೀನಿವಾಸಪುರದವರೆಗೂ ನೀರು ಹೋಗುತ್ತಲೇ ಇಲ್ಲ. ನೀರನ್ನು ರೈತರು ಮೇಲ್ಭಾಗದಲ್ಲಿ ಎತ್ತುವಳಿ ಮಾಡುತ್ತಿದ್ದಾರೆ. ಇದರಿಂದ ಕೆಳಭಾಗದ ರೈತರಿಗೆ ನೀರು ತಲುಪುತ್ತಿಲ್ಲ. 1,400 ಕೋಟಿ ರೂ.ಗಳನ್ನು ಕೆಲವೇ ರೈತರಿಗಾಗಿ ಖರ್ಚು ಮಾಡಿದಂತಾಗಿದೆ ಎಂದರು. ನೀರು ಎತ್ತುವಳಿ ಮಾಡುತ್ತಿರುವವರು ನನ್ನ ನೆಂಟರೇ ಆಗಿದ್ದರೂ ಬಿಡಬೇಡಿ. ನಿವೃತ್ತ ಸೈನಿಕರ ಗಸ್ತು ಹಾಕುತ್ತೇವೆ ಎಂದು ಹೇಳಿಯೂ ಸರ್ಕಾರ ನಿಯೋಜನೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಮಾಷೆ ವಿಷಯವಾಗಿದೆ: ಎತ್ತಿನಹೊಳೆ ಯೋಜನೆ ತಮಾಷೆ ವಿಷಯ ವಾಗಿದೆ ಎಂದು ರಮೇಶ್​ಕುಮಾರ್ ವಿಶ್ಲೇಷಿಸಿದರು. ಎತ್ತಿನಹೊಳೆ ಯೋಜನೆಯ ನೀರನ್ನು ತಮ್ಮ ಕ್ಷೇತ್ರಕ್ಕೂ ನೀಡಬೇಕು ಎಂದು ತುರುವೇಕೆರೆ ಶಾಸಕ ಮಸಾಲ ಜಯರಾಮ್ ಒತ್ತಾಯಿಸಿದರು. ಕುಣಿಗಲ್ ಶಾಸಕರೂ ಈ ಕೋರಿಕೆಗೆ ದನಿಗೂಡಿಸಿದರು. ಈ ವೇಳೆ ಮಾತನಾಡಿದ ರಮೇಶ್​ಕುಮಾರ್, ಬೆಂಗಳೂರಿಗೆ 24 ಟಿಎಂಸಿ ಮತ್ತು ಕೋಲಾರ, ಚಿಕ್ಕಬಳ್ಳಾಪುರಕ್ಕೆ 8 ಟಿಎಂಸಿ ನೀರು ಕೊಡುವುದಾಗಿ ಸರ್ಕಾರ ಹೇಳಿದೆ. ಎಷ್ಟು ನೀರು ಸಿಗುತ್ತದೆ ಎಂಬ ಬಗ್ಗೆ ಇನ್ನೂ ಖಚಿತತೆ ಇಲ್ಲ. ಇಷ್ಟರಲ್ಲಿ ಹೊಸ ಬೇಡಿಕೆಗಳು ಬಂದಿವೆ ಎಂದರು. ಒಂದೇ ಒಂದು ಡ್ರಾಪ್ ನೀರಿಲ್ಲದ ನಮ್ಮ ಭಾಗಕ್ಕೆ ಬೆಂಗಳೂರಿನಲ್ಲಿ ತೊಳೆದುಕೊಂಡ ನೀರನ್ನಾದರೂ ಕೊಡಿ ಎಂದು ಕೇಳುತ್ತಲೇ ಇದ್ದೇವೆ ಎಂದು ಅಸಮಾಧಾನ ಹೊರಹಾಕಿದರು. ಈ ವೇಳೆ ನಾವು ನೀರು ಕೇಳುವುದೇ ತಪ್ಪಾ ಎಂದು ಜಯರಾಂ ಪ್ರಶ್ನಿಸಿದರು. ನಮ್ಮ ರೈತರು ಎತ್ತಿನ ಹೊಳೆ ಯೋಜನೆ ನೀರನ್ನು ಕೊಟ್ಟರಷ್ಟೇ ಭೂಮಿ ಬಿಟ್ಟುಕೊಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆಂದರು. ಯೋಜನಾ ವರದಿಯಲ್ಲಿ ತುರುವೇಕೆರೆಗೆ ನೀರು ಹಂಚಿಕೆಯಾಗಿಲ್ಲ. ಎತ್ತಿನಹೊಳೆ ಯೋಜನೆಯಲ್ಲಿ ಹೆಚ್ಚುವರಿ ನೀರಿನ ಲಭ್ಯತೆ ಇದ್ದರೆ ಆಗ ಪರಿಶೀಲಿಸಲಾಗುತ್ತದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net