ಕ್ಷೇತ್ರದ ಅಭಿವೃದ್ಧಿ ನೋಡಿ ಮತ ನೀಡುವಂತೆ ಮಾಧುಸ್ವಾಮಿ ಮನವಿ

J C Madhuswami
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಹೆಸರಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಮತ ಪ್ರಚಾರ ನಡೆಸಿದರು.
Published on

ಚಿಕ್ಕನಾಯಕನಹಳ್ಳಿ: ತಾಲೂಕಿನ ಶೆಟ್ಟಿಕೆರೆ ಹೋಬಳಿಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಬೆಂಬಲಿಗರೊಂದಿಗೆ ಅಬ್ಬರದ ಪ್ರಚಾರ ನಡೆಸಿದರು. ತಾಲೂಕಿನ ಅಭಿವೃದ್ಧಿಯ ಕನಸುಗಳ ಈಡೇರಿಕೆಗೆ ಮತ್ತೊಮ್ಮೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಹೆಸರಹಳ್ಳಿಯಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 2018ಕ್ಕಿಂತ ಹಿಂದೆ ತಾಲೂಕಿನಲ್ಲಿ ಏನು ಅಭಿವೃದ್ಧಿ ನಡೆದಿವೆ, ಕಳೆದ ಐದು ವರ್ಷದಲ್ಲಿ ಎಷ್ಟು ಅಭಿವೃದ್ಧಿಯಾಗಿವೆ ಎಂಬ ಸಾಕ್ಷಿಗುಡ್ಡೆಗಳಿವೆ, ಜನರು ಯೋಚಿಸಿ ಮತ ನೀಡಬೇಕು ಎಂದರು.

ಅತ್ಯಂತ ಹಿಂದುಳಿದಿರುವ ಕ್ಷೇತ್ರದಲ್ಲಿ ನಾನು ಸಚಿವನಾಗಿ ಸಿಕ್ಕ ಅವಕಾಶ ಬಳಸಿಕೊಂಡು ಅಭಿವೃದ್ಧಿಯ ಮುನ್ನುಡಿ ಬರೆದಿದ್ದೇನೆ. ಮತ್ತಷ್ಟು ಅಧಿಕಾರ ಸಿಕ್ಕರೆ ಈ ಭಾಗದ ರೈತರ ಮಕ್ಕಳಿಗೆ ಇಲ್ಲಿಯೇ ಉದ್ಯೋಗ ಸಿಗುವ ವಾತಾವರಣ ನಿರ್ಮಿಸುವ ಜವಾಬ್ದಾರಿ ನಿಭಾಯಿಸುತ್ತೇನೆ ಎಂದರು.

ಶೆಟ್ಟಿಕೆರೆ ಕೆರೆ ಸೇರಿದಂತೆ ಹುಳಿಯಾರು ಕೆರೆವರೆಗೂ ಸ್ವಾಭಾವಿಕವಾಗಿ ಹಳ್ಳದಲ್ಲಿ ಹೇಮಾವತಿ ನೀರು ಹರಿದ ಪರಿಣಾಮ ರೈತರ ತೋಟಗಳು ಉಸಿರಾಡುವಂತಾಗಿದೆ. ಮುಂದಿನ ದಿನದಲ್ಲಿ ಎಲ್ಲ ಕೆರೆಗಳಿಗೂ ಪೈಪ್‌ಲೈನ್ ಮೂಲಕ ನೀರು ಹರಿಯಲಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಇಟ್ಟಿಗೆ ರಂಗಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಶಶಿಧರ್ ಶೆಟ್ಟಿಕೆರೆ, ಗವಿಯಪ್ಪ, ಕುಮಾರಣ್ಣ, ವಿನಯ್, ರಾಕೇಶ್ ಮತ್ತಿತರ ಮುಖಂಡರು ಇದ್ದರು.

ಅಭಿವೃದ್ಧಿ ಹರಿಕಾರ ಜೆಸಿಎಂಗೆ ಮತ ಹಾಕಿ

ಹುಳಿಯಾರು: ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆಂದೂ ಆಗದಷ್ಟು ಅಭಿವೃದ್ಧಿ ನಡೆದಿದ್ದು, ತಾಲೂಕಿನ ಅಭಿವೃದ್ಧಿ ಹರಿಕಾರ ಜೆ.ಸಿ.ಮಾಧುಸ್ವಾಮಿ ಅವರಿಗೆ ಮತ್ತೊಂದು ಅವಕಾಶ ನೀಡಬೇಕು ಎಂದು ಪಪಂ ಅಧ್ಯಕ್ಷ ಕೆ.ಎಂ.ಎಲ್ ಕಿರಣ್ ಮನವಿ ಮಾಡಿದರು.

ಪಟ್ಟಣದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಪರವಾಗಿ ಮತಯಾಚನೆ ಮಾಡಿದ ಅವರು, ಹುಳಿಯಾರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸಚಿವ ಮಾಧುಸ್ವಾಮಿ ಕೊಡುಗೆಯನ್ನು ಜನರು ಸ್ಮರಿಸಿಕೊಳ್ಳಬೇಕು ಎಂದರು.
ಕ್ಷೇತ್ರದ ಜನರ ಬದುಕು ಸುಧಾರಿಸಲು, ನೀರಾವರಿ, ವಿದ್ಯುತ್, ರಸ್ತೆ ಅಭಿವೃದ್ದಿಗಾಗಿ ಸಾವಿರಾರು ಕೋಟಿ ರೂ.ಗಳ ಕೆಲಸ ಮಾಡಿದ್ದಾರೆ. ರಾಜ್ಯ, ಕ್ಷೇತ್ರದ ಸಮಸ್ಯೆ ನಿವಾರಿಸಲು ವಿಧಾನಸಭೆಯಲ್ಲಿ ಅತ್ಯಂತ ಪ್ರಖರವಾಗಿ ಧ್ವನಿ ಎತ್ತಿ ಸದನಶೂರ ಎನಿಸಿಕೊಂಡಿದ್ದಾರೆ. ಸಮರ್ಥ ನಾಯಕನನ್ನು ಮತ್ತೊಮ್ಮೆ ವಿಧಾನಸಭೆಗೆ ಕಳಿಸುವುದು ಕ್ಷೇತ್ರದ ಜನರ ಪಾಲಿಗೆ ಹೆಮ್ಮೆಯ ಸಂಗತಿ ಎಂದರು.

ಪಪಂ ಉಪಾಧ್ಯಕ್ಷೆ ಶ್ರುತಿ ಸನತ್, ಪಪಂ ಸದಸ್ಯರಾದ ಹೇಮಂತ್ ಕುಮಾರ್, ಚಂದ್ರಶೇಖರ್, ಬೀಬಿ ಫಾತಿಮಾ, ಬಡ್ಡಿಪುಟ್ಟರಾಜು, ಸಂಧ್ಯಾ, ಬಳೆದಾಸಪ್ಪ, ಗೀತಾ ಅಶೋಕ್‌ಬಾಬು, ಪಟಾಕಿ ಶಿವಣ್ಣ, ಸಜ್ಜಾದ್, ಗುಜರಿನಾಗಣ್ಣ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ ತಾಲೂಕಿಗೆ ಹೇಮಾವತಿ ನೀರು ಹರಿದಿದೆ, ತಾಲೂಕಿನ ಶೇ.90 ಕೆರೆಗಳಿಗೆ ನೀರಾವರಿ ಸೌಲಭ್ಯವಾಗಿದ್ದು ಅಂತರ್ಜಲ ವೃದ್ಧಿಯಾಗಿ ರೈತರ ಬದುಕು ಉಳಿದಿದೆ. ಭದ್ರಾ, ಎತ್ತಿನಹೊಳೆ ನೀರು ಕ್ಷೇತ್ರದಲ್ಲಿ ಹರಿಯಬೇಕಾದರೆ ಮತ್ತೊಮ್ಮೆ ಮಾಧುಸ್ವಾಮಿ ಗೆಲುವು ಸಾಧಿಸಬೇಕು. | ಬಡ್ಡಿಪುಟ್ಟಣ್ಣ, ಪಪಂ ಸದಸ್ಯ, ಹುಳಿಯಾರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net