ಮಧೂರು ಮೂಲಸ್ಥಾನ, ದೇಗುಲ ವಠಾರದಲ್ಲಿ ಅಭಿವೃದ್ಧಿ ಕಾರ್ಯ ಬಿರುಸು

New Project (7)
Published on

ಕಾಸರಗೋಡು: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ ಪುನಃಪ್ರತಿಷ್ಠಾ ಬ್ರಹ್ಮಕಲಶ ಹಾಗೂ ಮೂಡಪ್ಪಸೇವೆಗೆ ಸಿದ್ಧಗೊಳ್ಳುತ್ತಿರುವಂತೆಯೇ ಮೂಲಸ್ಥಾನದಲ್ಲೂ ಅಭಿವೃದ್ಧಿ ಕಾರ್ಯ ಬಿರುಸಿನಿಂದ ಸಾಗುತ್ತಿದೆ.

ಮಧೂರು ದೇಗುಲದಿಂದ ಕಾಸರಗೋಡು ಹಾದಿಯಲ್ಲಿ ಒಂದೂವರೆ ಕಿ.ಮೀ ದೂರದ ಉಳಿಯತ್ತಡ್ಕದಲ್ಲಿರುವ ಮೂಲಸ್ಥಾನದಲ್ಲಿ ಶ್ರೀಮದರು ಮಾತೆ ಮಂಟಪ, ಮದರು ಮಾತೆಯ ಆರಾಧ್ಯ ದೈವ ಪಂಜುರ್ಲಿ ಸ್ಥಾನ, ಶ್ರೀದೇವರ ಕಟ್ಟೆಗಳೂ ಜೀರ್ಣೋದ್ಧಾರದ ಹಂತದಲ್ಲಿವೆ.

ಹುಲ್ಲು ಸಂಗ್ರಹಿಸುತ್ತಿರುವಾಗ ಪರಿಶಿಷ್ಟ ಜಾತಿಯ ಮದರು ಎಂಬ ಮಹಿಳೆಗೆ ಮಧೂರು ಶ್ರೀ ಮದನಂತೇಶ್ವರನ ಲಿಂಗ ಲಭಿಸಿದ ಕುಳೋವುತ್ತಡ್ಕ ಎಂಬ ಪ್ರದೇಶ ಇಂದು ಉಳಿಯತ್ತಡ್ಕ ಎಂಬುದಾಗಿ ಕರೆಯಲ್ಪಡುತ್ತಿದೆ. ಮದರು ಅವರಿಂದಾಗಿಯೇ ಮಧೂರು ಹೆಸರು ಬಂದಿರುವುದಾಗಿಯೂ ಇತಿಹಾಸವಿದೆ. ಮಧೂರು ದೇಗುಲದ ಮೂಲಸ್ಥಾನ ಕುಳೋವುತ್ತಡ್ಕದಲ್ಲಿ ಲಿಂಗ ಲಭಿಸಿದ ಜಾಗ ಕಡು ಬೇಸಿಗೆಯಲ್ಲೂ ಹಚ್ಚ ಹಸಿರಿನಿಂದ ಕೂಡಿರುತ್ತದೆ. ಲಿಂಗ ಲಭಿಸಿದ ಅನತಿ ದೂರದಲ್ಲಿ ಕೆರೆಯೊಂದು ಇಂದಿಗೂ ಅಸ್ತಿತ್ವದಲ್ಲಿದೆ. ಇದರ ಅಭಿವೃದ್ಧಿಯೂ ನಡೆಯಬೇಕಾಗಿದೆ. ಸುಮಾರು ನಾಲ್ಕು ಎಕರೆ ವಿಸ್ತೀರ್ಣದ ಉಳಿಯತ್ತಡ್ಕ ಮೂಲಸ್ಥಾನದಲ್ಲಿ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂಬುವುದು ಭಕ್ತರ ಅಭಿಪ್ರಾಯ.

ಮದರು ಮಾತೆಗೆ ಸೂಕ್ತ ಗುಡಿ ನಿರ್ಮಿಸಿ, ಅಗತ್ಯ ಪ್ರಾಶಸ್ತ್ಯ ನೀಡುವಂತೆ ಮದರು ಮಹಾಮಾತೆ ಮೊಗೇರ ಸಂಘ 2017ರಿಂದಲೇ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಕೊನೆಗೂ ಹೋರಾಟ ಫಲಕಂಡಿದೆ. ಮೂಲಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಜತೆಗೆ ಮೂಲಸ್ಥಾನದ ಪ್ರವೇಶ ಭಾಗದಲ್ಲಿ ಮಹಾದ್ವಾರವೊಂದನ್ನು ಮದರು ಮಹಾಮಾತೆ ಮೊಗೇರ ಸಂಘ ನಿರ್ಮಿಸಿ ಕೊಡುತ್ತಿದ್ದು, ಇದರ ಕಾಮಗಾರಿಯೂ ಭರದಿಂದ ಸಾಗುತ್ತಿದೆ.

ಮಧೂರು ದೇಗುಲದಲ್ಲೂ ಕಾಮಗಾರಿಗಳಿಗೆ ಅಂತಿಮ ಸ್ಪರ್ಶ ನಡೆಯುತ್ತಿದೆ. ಬಹುತೇಕ ಕೆಲಸಗಳು ಶ್ರಮದಾನದ ಮೂಲಕವೇ ನಡೆಸಲಾಗುತ್ತಿದೆ. ಮಾ.26ರಂದು ದಾನಿ, ಉದ್ಯಮಿ ಕುಳೂರುಕನ್ಯಾನ ಸದಾಶಿವ ಶೆಟ್ಟಿ ಕೊಡುಗೆಯಾಗಿ ನೀಡಿರುವ ಭವ್ಯ ಶಿಲಾಮಯ ಮಹಾದ್ವಾರದ ಲೋಕಾರ್ಪಣೆ ಕಾರ್ಯಕ್ರಮದೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಗೆ ಚಾಲನೆ ಲಭಿಸಲಿದೆ.

ಮೂಲಸ್ಥಾನದಲ್ಲಿ ಸುಮಾರು ನಾಲ್ಕು ಎಕರೆ ಜಾಗವಿದ್ದು, ಇದಕ್ಕೆ ಹೊಂದಿಕೊಂಡಿರುವ ಸುಮಾರು ಒಂಬತ್ತು ಎಕರೆ ಜಾಗವನ್ನೂ ಒಳಗೊಂಡಂತೆ ಈ ಎಲ್ಲ ಜಾಗಕ್ಕೆ ಸೂಕ್ತ ಆವರಣ ಗೋಡೆ ನಿರ್ಮಿಸಿ ಜಾಗ ಸಂರಕ್ಷಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಸಂಘದ ವತಿಯಿಂದ ಸುಸಜ್ಜಿತ ಮಹಾದ್ವಾರದ ಕೆಲಸ ಪ್ರಗತಿಯಲ್ಲಿದೆ. ಮೂಲಸ್ಥಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದರ ಜತೆಗೆ ಮುಂದೆ ಮೂಲಸ್ಥಾನದಲ್ಲಿ ಗೋಶಾಲೆ ನಿರ್ಮಿಸಬೇಕು ಎಂಬುದು ನಮ್ಮ ಬೇಡಿಕೆ. ಸುರೇಶ್ ಅಜಕ್ಕೋಡು, ಕೃಷ್ಣದಾಸ್ ಪದಾಧಿಕಾರಿಗಳು, ಮದರು ಮಹಾಮಾತೆ ಮೊಗೇರ ಸಂಘ https://www.vijayavani.net/falguni-youth-circle-anniversary https://www.vijayavani.net/student-harassed-on-bus

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net