

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ದೇವರ ಅನುಗ್ರಹ ಹಾಗೂ ಲಕ್ಷಾಂತರ ಭಕ್ತರ ಸಹಕಾರದೊಂದಿಗೆ ಐತಿಹಾಸಿಕ ಭಕ್ತಿಪುರಸ್ಸರ ಪರ್ವ ಸಂಪನ್ನಗೊಂಡಿದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.
ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶ- ಮೂಡಪ್ಪ ಸೇವೆಯ ಕೊನೆಯ ದಿನವಾದ ಸೋಮವಾರ ಸಮಾರೋಪ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವ ಉಪಾಧ್ಯಕ್ಷ ಕೆ.ಕೆ.ಶೆಟ್ಟಿ ಕುತ್ತಿಕ್ಕಾರ್ ಅಧ್ಯಕ್ಷತೆ ವಹಿಸಿ, ದೇವರು ನೀಡಿದ ಪ್ರೇರಣೆಯಿಂದ ಮಧೂರು ಕ್ಷೇತ್ರದಲ್ಲಿ ಜೀರ್ಣೋದ್ಧಾರದಿಂದ ತೊಡಗಿ, ಅದ್ದೂರಿ ಸಮಾರಂಭ ನೆರವೇರಿದೆ ಎಂದರು.
ಗೌರವ ಉಪಾಧ್ಯಕ್ಷ ಬಿ.ಕೆ.ಮಧೂರು, ಉಪಾಧ್ಯಕ್ಷ ಗಿರೀಶ್ ಸಂಧ್ಯಾ, ಕಾರ್ಯದರ್ಶಿ ಎಂ.ಅಪ್ಪಯ್ಯ ನಾಯ್ಕ, ಸದಸ್ಯರು ಹಾಗೂ ವಿವಿಧ ಸಮಿತಿಗಳ ಅಧ್ಯಕ್ಷರಾದ ಸಂತೋಷ್ ಮಧೂರು, ವಿನು, ಕಾರ್ತಿಕ್ ಶೆಟ್ಟಿ, ಪಿ.ರಮೇಶ್, ಮುರಳಿ ಗಟ್ಟಿ, ಕೆ.ಸುರೇಶ್, ಸುರೇಶ್ ಕುದ್ರೆಪ್ಪಾಡಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ ಅಗಲ್ಪಾಡಿ, ಸತ್ಯನಾರಾಯಣ ತಂತ್ರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನಾರಾಯಣಯ್ಯ ಕೊಲ್ಯ ವಂದಿಸಿದರು.
ಆರಂಭದಲ್ಲಿ ಹಲವು ಸವಾಲುಗಳನ್ನೊಡ್ಡಿ ಅಷ್ಟೇ ಅಚ್ಚರಿಯಿಂದ ಅದನ್ನು ಅನುಗ್ರಹಪೂರ್ವಕವಾಗಿ ಸಾಂಗವಾಗಿ ನೆರವೇರಲು ಕಾರಣವಾದ ಈ ಸಾನ್ನಿಧ್ಯದ ಮುಂದೆ ನಾವು ತೃಣರೆಂಬ ಭಾವ ಮಾತ್ರ ಇರಲಿ. ಅಹರ್ನಿಶಿ ದುಡಿದ ಕಾರ್ಯಕರ್ತರ ಸಮರ್ಪಣಾ ಭಾವದ ತ್ಯಾಗ, ನಿಶ್ಕಲ್ಮಷ ಕಾರ್ಯನಿರ್ವಹಣೆ ಸ್ತುತ್ಯರ್ಹ. ಶ್ರೀ ಮೋಹನದಾಸ ಸ್ವಾಮೀಜಿ ಮಾಣಿಲ ಶ್ರೀಧಾಮ