ಮಧುರೆ ಕೆರೆ ತೆಪ್ಪೋತ್ಸವ ಸಂಭ್ರಮ : 22 ವರ್ಷದ ಬಳಿಕ ತುಂಬಿ ಕೋಡಿ ಹರಿದ ಐತಿಹಾಸಿಕ ಕೆರೆ

3cd7e8c6-cd78-4dd7-a5e8-ca37cace9ac5
Published on

ವಿಜಯವಾಣಿ ಸುದ್ದಿಜಾಲ ಮಧುರೆ


ಇಪ್ಪತೆರಡು ವರ್ಷಗಳ ಬಳಿಕ ಕೋಡಿ ಹರಿದ ತಾಲೂಕಿನ ಮಧುರೆ ಅಮಾನಿಕೆರೆಗೆ ಬುಧವಾರ ಸ್ಥಳೀಯರು ಹಾಗೂ ಅಕ್ಕ ಪಕ್ಕದ ಗ್ರಾಮದವರು ಬಾಗಿನ ಅರ್ಪಿಸಿ ತೆಪ್ಪೋತ್ಸವ ನೆರವೇರಿಸಿದರು.
ಮಧುರೆ ಶನಿಮಹಾತ್ಮಸ್ವಾಮಿ ಹಾಗೂ ಕೆರೆ ಏರಿ ಆಂಜನೇಯ ಸ್ವಾಮಿಗೆ ರುದ್ರಾಭಿಷೇಕ ನೆರವೇರಿಸಿ ಉತ್ಸವಮೂರ್ತಿಗಳನ್ನು ಬೆಳ್ಳಿರಥದಲ್ಲಿ ಕೂರಿಸಿ ಷೋಡಶೋಪಚಾರ ಪೂಜೆ ರಾಜೋಪಚಾರ ಪೂಜಾ ವಿಧಾನಗಳೊಂದಿಗೆ ಪೂರ್ಣ ಕುಂಭ ಸಮೇತವಾಗಿ ಮೆರವಣಿಗೆ ನಡೆಸಲಾಯಿತು.
ವೀರಗಾಸೆ ವಾದ್ಯ ವೃಂದ ಹಾಗೂ ತಮಟೆ ವಾದ್ಯಗಳೊಂದಿಗೆ ಬೆಳ್ಳಿರಥದ ಮೆರವಣಿಗೆಯು ಕೋಡಿಪಾಳ್ಯ(ಗಾಡಿಗರಪಾಳ್ಯ) ಗ್ರಾಮಕ್ಕೆ ಆಗಮಿಸಿ ಅಮಾನಿಕೆರೆಗೆ ಗಂಗೆಪೂಜೆ ನೆರವೇರಿಸಿ, ಬಾಗಿನ ಅರ್ಪಿಸಲಾಯಿತು. ಬಳಿಕ ಶನಿಮಹಾತ್ಮ ಸ್ವಾಮಿ ಹಾಗೂ ಕೆರೆ ಏರಿ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಗಳನ್ನು ಅಲಂಕೃತ ತೆಪ್ಪದಲ್ಲಿ ಪ್ರತಿಷ್ಠಾಪಿಸಿ ತೆಪ್ಪೋತ್ಸವ ನೆರವೇರಿಸಲಾಯಿತು. ಗ್ರಾಮಸ್ಥರು ಉತ್ಸವಮೂರ್ತಿಗಳಿಗೆ ಪೂಜೆ ಸಲ್ಲಿಸಿದರು.


ತಮಟೆ ಸದ್ದಿಗೆ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮದ ಮುಖಂಡರು ಹೆಜ್ಜೆ ಹಾಕಿ ಸಂಭ್ರಮದಲ್ಲಿ ಭಾಗಿಯಾದರು.
ಕನಸವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಕರ್ನಾಟಕ ರಾಜ್ಯ ಅಪೇಕ್ಸ್ ಬ್ಯಾಂಕ್ ನಿರ್ದೇಶಕ ಚುಂಚೇಗೌಡ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ದಯಾನಂದ ಸ್ವಾಮಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಮಂಜಣ್ಣ ನೃತ್ಯದ ಮೂಲಕ ಗಮನ ಸೆಳೆದರು. ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಪ್ರಭಾಕರ್, ಮುಖಂಡರಾದ ಶೋಭಾ, ಪುಷ್ಪಲತಾ, ಚನ್ನಮ್ಮ, ವರುಣ್ ಗೌಡ, ಕುಮಾರ್ ಬಾಬು, ಶಶಿಕುಮಾರ್ ಇತರರು ಇದ್ದರು.

ಸಾವಿರಾರು ಮಂದಿ ಭಾಗಿ
ವರುಣನ ಕೃಪೆಯಿಂದ ಈ ವರ್ಷ ಭಾರಿ ಮಳೆಯಾಗಿದ್ದು ರೈತರಿಗೆ ಖುಷಿ ತಂದಿದೆ ಎಂದು ಗ್ರಾಪಂ ಅಧ್ಯಕ್ಷ ಮಂಜುನಾಥ್ ಹೇಳಿದರು. ಮಧುರೆಕೆರೆ ತುಂಬಿಕೋಡಿ ಬಿದ್ದ ಹಿನ್ನೆಲೆಯಲ್ಲಿ ಶನಿ ಮಹಾತ್ಮ ಸ್ವಾಮಿ ಹಾಗೂ ಏರಿಯ ಮೇಲೆ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಗಳನ್ನು ತೆಪ್ಪದಲ್ಲಿ ಪ್ರತಿಷ್ಠಾಪಿಸಿ ತೆಪ್ಪೋತ್ಸವ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು ಆರು ಸಾವಿರ ಜನ ಪ್ರಸಾದ ಸ್ವೀಕರಿಸಿದ್ದಾರೆ ಎಂದರು.

ಕೆರೆ ಅಭಿವೃದ್ಧಿ ನಿರ್ಲಕ್ಷ್ಯ
ತೆಪ್ಪೋತ್ಸವ ಬಹಳ ಅಚ್ಚುಕಟ್ಟಾಗಿ ನೆರವೇರಿರುವುದು ಬಹಳ ಸಂತಸ ತಂದಿದೆ. ಆದರೆ ಕೆರೆ ನಿರ್ಲಕ್ಷಕ್ಕೆ ಒಳಪಟ್ಟಿದೆ. ಕೆರೆಯ ಸ್ವಚ್ಛತೆಯಾಗಿಲ್ಲ. ಇದೊಂದು ಪ್ರಸಿದ್ಧ ತಾಣವಾಗಿದ್ದು, ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ ಅದ್ದರಿಂದ ಈ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾರ್ಪಾಡು ಮಾಡಬೇಕು ಎಂದು ಗ್ರಾಮದ ಮುಖಂಡ ಸತೀಶ್ ಅಭಿಪ್ರಾಯಪಟ್ಟರು.


ಈ ಎಲ್ಲ ಕಾರ್ಯಕ್ರಮ ರಾಜಕೀಯಕ್ಕೆ ತಳಕು ಹಾಕಿಕೊಳ್ಳಬಾರದು ಅದನ್ನು ಬಿಟ್ಟು ಸಾಮಾಜಿಕ ಕಳಕಳಿಯಿಂದ ಕ್ಷೇತ್ರದ ಅಭಿವೃದ್ಧಿಗೆ ಕೆರೆಯ ಸ್ವಚ್ಛತೆಗೆ ಮಹತ್ವ ಕೊಡಬೇಕು ಎಂದರು.
ಎಸ್ಸಿವಿ ಗ್ರೂಪ್ ಮಾಲೀಕ ನಾಗೇಂದ್ರ ರಾವ್ ಅನ್ನ ದಾಸೋಹ ನೇತೃತ್ವ ವಹಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net