ಜು.21ರಂದು ಮಧುರಕಾವ್ಯ ಚಿತ್ರ ತೆರೆಗೆ: ನಿರ್ದೇಶಕ, ನಟ ಮಧುಸೂದನ್ ಮಾಹಿತಿ

2 (4)
Published on

ಮಂಡ್ಯ: ತಾಯಿ ಮತ್ತು ಮಗನ ಪ್ರೀತಿಯನ್ನು ಸಾರುವ ಮಧುರ ಕಾವ್ಯ ಸಿನಿಮಾ ಜು.21ರಂದು ರಾಜ್ಯಾದ್ಯಂತ 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಾಯಕ ನಟ, ನಿರ್ದೇಶಕ ಮಧುಸೂದನ್ ತಿಳಿಸಿದರು.

ಸುಮಾರು 80 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಸಿನಿಮಾ ಪಾರಂಪರಿಕ ಆಯುರ್ವೇದ ನಾಟಿ ವೈದ್ಯ ಪದ್ಧತಿ ಪ್ರಮುಖ ಕಥಾಹಂದರವನ್ನು ಒಳಗೊಂಡಿದೆ. ಈ ಸಿನಿಮಾ ಮೂಲಕ ಮಣ್ಣಿನ ಸಂಸ್ಕೃತಿಯನ್ನು ಬಿಂಬಿಸಲಾಗಿದ್ದು, ಅದಕ್ಕೆ ಕಮರ್ಷಿಯಲ್ ಟಚ್ ನೀಡಲಾಗಿದೆ. ಒಂದೊಳ್ಳೆ ಸಂದೇಶವನ್ನು ನೀಡಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಿರುಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದ ನನಗೆ ಸಿನಿಮಾ ಮಾಡಬೇಕೆಂಬ ತುಡಿತವಿತ್ತು. ಅದೀಗ ಮಧುರ ಕಾವ್ಯದೊಂದಿಗೆ ಸಾಕಾರಗೊಂಡಿದೆ. ಕೆಟ್ಟವರನ್ನು ಕೊಲ್ಲದೆ, ಅವರಲ್ಲಿನ ಕೆಟ್ಟತನವನ್ನು ಕೊಲ್ಲಬೇಕೆಂಬ ಆಶಯವನ್ನು ಸಿನಿಮಾ ಮೂಲಕ ಹೇಳಲಾಗಿದೆ. ತಾಯಿ-ಮಗನ ಬಾಂಧವ್ಯವನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಸಂಘಟನೆ, ರಾಜಕೀಯ, ಹವ್ಯಾಸಿ ರಂಗಭೂಮಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಂಡ್ಯದವರೇ ಆದ ಯಶೋಧಾ ಅವರು ತಾಯಿ ಪಾತ್ರದಲ್ಲಿ ನಟಿಸಿದ್ದಾರೆ ಎಂದು ವಿವರಿಸಿದರು.

ಸತೀಶ್ ಮೌರ್ಯ ಸಂಗೀತ ನೀಡಿದ್ದು, ಉದಯಭಾಸ್ಕರ್ ಛಾಯಾಗ್ರಹಣವಿದೆ. ರಾಜೇಶ್ ಕೃಷ್ಣನ್, ಮಧುಬಾಲಕೃಷ್ಣ, ಚಿತ್ರ ಅವರು ಹಾಡುಗಳನ್ನು ಹಾಡಿದ್ದಾರೆ. ಹೊಸಬರ ತಂಡವನ್ನು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಸಿನಿಮಾ ಪ್ರೇಮಿಗಳು ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.

ಸಂಗೀತ ನಿರ್ದೇಶಕ ಸತೀಶ್ ಮೌರ್ಯ, ನಟಿ ಯಶೋಧಾ, ನಟರಾದ ರಾಜ್‌ಕುಮಾರ್ ನಾವಿಕ್, ಶ್ರೀನಿವಾಸ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net