

ನಮ್ಮಲ್ಲಿ ಹೆಚ್ಚು ಪ್ರಚಾರ ಪಡೆಯದ ಆಯುರ್ವೇದ ಪದ್ಧತಿ ವಿದೇಶಗಳಲ್ಲಿ ಜನಪ್ರಿಯವಾಗಿದೆ. ಇದೇ ವೇಳೆ ಅಲ್ಲಿ ಮಾರಾಟವಾಗದ ಔಷಧಿಗಳು ನಮ್ಮಲ್ಲಿ ಹೆಚ್ಚಾಗಿ ಬಳಕೆ ಆಗುತ್ತಿವೆ. ಈ ರೀತಿಯ ವೈರುಧ್ಯದ ಬಗ್ಗೆ ಬೆಳಕು ಚೆಲ್ಲಿ, ಆಯುರ್ವೇದ, ನಾಟಿ ವೈದ್ಯ ಪದ್ಧತಿ ಬಗ್ಗೆ ಮನವರಿಕೆ ಮಾಡಿಕೊಡುವ ಮಧುರ ಕಾವ್ಯ ಎಂಬ ಚಲನಚಿತ್ರ ಜು.21 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಮಧುಸೂದನ್ ತಿಳಿಸಿದರು.
ಇದು ಹೊಡೆದಾಟ, ಅತಿರಂಜಕ ಇಲ್ಲದ ಕೇವಲ ಜನರಲ್ಲಿ ಅರಿವು ಮೂಡಿಸುವ ಚಿತ್ರವಾಗಿದೆ. ಆಲೋಪತಿ ವೈದ್ಯರು ಹಾಗೂ ಔಷಧಿ ಕಂಪನಿಗಳು ಜನರನ್ನು ಹೇಗೆ ವಂಚಿಸುತ್ತಿವೆ ಎಂಬ ಬಗ್ಗೆ ಬೆಳಕು ಚೆಲ್ಲುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಮ್ಮಲ್ಲಿ ಸಣ್ಣಪುಟ್ಟ ಆನಾರೋಗ್ಯಕ್ಕೂ ವೈದ್ಯರ ಮೊರೆ ಹೋಗುತ್ತೇವೆ. ಆದರೆ, ಮನೆಯ ಅಡುಗೆ ಮನೆಯಲ್ಲಿಯೇ ಇರುವ ವಸ್ತುಗಳಿಂದ ಹೇಗೆ ಅನಾರೋಗ್ಯ ದೂರ ಮಾಡಿಕೊಳ್ಳಬಹುದೆಂಬ ಅರಿವನ್ನೂ ಈ ಚಿತ್ರ ನೀಡುತ್ತದೆ. ಹೀಗಾಗಿ ಜನತೆ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು. ಕಲಾವಿದ ಅಣ್ಣಪ್ಪಸ್ವಾಮಿ, ಸಂಗೀತ ನಿರ್ದೇಶಕ ಸತೀಶ್ ಮೌರ್ಯ, ರಾಜು ಕುಮಾರ್ ನಾವಿಕ್ ಇದ್ದರು.