ಮಧೂರು ರಸ್ತೆ ಶೋಚನೀಯ

Ksd_Madhur
Published on

ಪುರುಷೋತ್ತಮ ಪೆರ್ಲ ಕಾಸರಗೋಡು

ಕೇರಳ ಹಾಗೂ ಕರ್ನಾಟಕದಲ್ಲಿ ಪ್ರಸಿದ್ಧಿಯಿರುವ ಕುಂಬಳೆ ಸೀಮೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕಾಸರಗೋಡಿನಿಂದ ಸಂಚರಿಸುವ ರಸ್ತೆ ಸಂಪೂರ್ಣ ಶಿಥಿಲಗೊಂಡಿದ್ದು, ವಾಹನ ಸಂಚಾರ ದುಸ್ತರವೆನಿಸಿದೆ.

ರಾಷ್ಟ್ರೀಯ ಹೆದ್ದಾರಿ ಕರಂದಕ್ಕಾಡಿನಿಂದ ಮಧೂರು ಕ್ಷೇತ್ರಕ್ಕೆ ಆರು ಕಿ.ಮೀ ದೂರವಿದ್ದು, ಸೂರ್ಲು, ಚೂರಿ, ರಾಮದಾಸನಗರ ಮುಂತಾದೆಡೆ ರಸ್ತೆ ಹೊಂಡಬಿದ್ದಿದೆ. ಕೆಲವೆಡೆ ರಸ್ತೆ ಇಕ್ಕಟ್ಟಿನಿಂದ ಕೂಡಿದ್ದು, ಅಂಗಡಿಮುಂಗಟ್ಟುಗಳು ರಸ್ತೆ ಅಂಚಿಗೆ ಕಾರ್ಯಾಚರಿಸುತ್ತಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗುತ್ತಿದೆ. ವಿದ್ಯುತ್ ಕಂಬಗಳನ್ನು ರಸ್ತೆ ಅಂಚಿಗೆ ಅಳವಡಿಸಿರುವುದರಿಂದ ವಾಹನ ಸಂಚಾರಕ್ಕೆ ಮತ್ತಷ್ಟು ಅಡಚಣೆಯುಂಟಾಗುತ್ತಿದೆ.

ಕೆಲವೊಮ್ಮೆ ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ತುಂಬಿಕೊಂಡು ಸಾಗುವಾಗ ರಸ್ತೆ ಅಂಚಿಗಿರುವ ವಿದ್ಯುತ್ ಕಂಬಗಳಿಂದ ಜೀವಾಪಾಯ ಉಂಟಾಗುತ್ತಿದೆ. ಕರಂದಕ್ಕಾಡಿನಲ್ಲಿ ಇತ್ತೀಚೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಶಾಲಾ ವಿದ್ಯಾರ್ಥಿಯೊಬ್ಬನ ತಲೆ ರಸ್ತೆ ಅಂಚಿಗಿರುವ ವಿದ್ಯುತ್ ಕಂಬಕ್ಕೆ ಬಡಿದು ದಾರುಣವಾಗಿ ಮೃತಪಟ್ಟ ಘಟನೆ ನಡೆದಿತ್ತು. ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಈ ರಸ್ತೆ ನಿರ್ವಹಣೆ ಕೊರತೆಯಿಂದ ಪ್ರತಿ ವರ್ಷ ಹಾಳಾಗುತ್ತಿದೆ. ರಾಜ್ಯದ ಪ್ರಮುಖ ಕ್ಷೇತ್ರವಾಗಿರುವ ಮಧೂರು ದೇಗುಲಕ್ಕೆ ಸಂಚರಿಸುವ ಪ್ರಸಕ್ತ ರಸ್ತೆಯ ಶೋಚನೀಯಾವಸ್ಥೆ ಬಗ್ಗೆ ಭಕ್ತರೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ದ್ವಿಪಥವಾಗಿ ಅಭಿವೃದ್ಧಿಗೆ ಆಗ್ರಹ

ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಮೂಡಪ್ಪ ಸೇವೆ ಮಾ.27ರಿಂದ ಏ.7ರ ವರೆಗೆ ನಡೆಯಲಿದ್ದು ಈ ಮಹೋತ್ಸವಕ್ಕೂ ಮೊದಲು ರಸ್ತೆ ಅಭಿವೃದ್ಧಿ ಕಾರ್ಯ ಪೂರ್ತಿಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ. ಹಲವು ವರ್ಷಗಳ ನಂತರ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ದೇವಾಲಯಕ್ಕೆ ಬರುವ ನಿರೀಕ್ಷೆಯಿದ್ದು, ದೇವಾಲಯಕ್ಕೆ ಸಂಚರಿಸುವ ಲೋಕೋಪಯೋಗಿ ಇಲಾಖೆಯ ಈ ರಸ್ತೆಯ ಶೋಚನೀಯಾವಸ್ಥೆ ಸರ್ಕಾರದ ವ್ಯವಸ್ಥೆಯನ್ನು ಅಣಕಿಸುವಂತಿದೆ. ಸೀಮೆಯ ಪ್ರಮುಖ ದೇವಾಲಯ ಮಧೂರಿನ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ಎದ್ದುಕಾಣುತ್ತಿದೆ. ದೇವಸ್ವಂ ಬೋರ್ಡ್‌ನ ಅಧೀನದಲ್ಲಿದ್ದರೂ, ಇಲ್ಲಿಗೆ ಆಗಮಿಸುವ ರಸ್ತೆ ಇಕ್ಕಟ್ಟಾಗಿದೆ. ಸೂಕ್ತ ಬಸ್ ತಂಗುದಾಣದ ವ್ಯವಸ್ಥೆ ಇಲ್ಲಿಲ್ಲ. ಕಾಸರಗೋಡಿನಿಂದ ಆರು ಕಿ.ಮೀ ದೂರವಿರುವ ಮಧೂರು-ಕಾಸರಗೋಡು ರಸ್ತೆಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸುವಂತೆ ನಾಗರಿಕರು ಹಾಗೂ ಭಕ್ತಾದಿಗಳು ಆಗ್ರಹಿಸುತ್ತಾ ಬಂದಿದ್ದರೂ, ಸರ್ಕಾರ ಮನವಿ ಆಲಿಸಲೇ ಇಲ್ಲ.

ಇತಿಹಾಸ ಪ್ರಸಿದ್ಧ ಕ್ಷೇತ್ರ ಮಧೂರಿನಲ್ಲಿ ದೀರ್ಘ ಕಾಲದ ನಂತರ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆ ನಡೆಯಲಿದ್ದು, ಭಕ್ತರ ಸುಗಮ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ರಸ್ತೆ ಅಭಿವೃದ್ಧಿಪಡಿಸುವಂತೆ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದ್ದು, ರಸ್ತೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವ ಭರವಸೆ ಸಮಿತಿಗಿದೆ.

- ಜಯದೇವ ಖಂಡಿಗೆ, ಮಧೂರು ದೇಗುಲ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net