

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನ ಸನಿಹದ ಮಧುವಾಹಿನಿ ಹೊಳೆ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಭಕ್ತರು ಮಹಾದ್ವಾರದ ಬಳಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ವಾಪಸಾದರು. ದೇವಸ್ಥಾನ ಸಿಬ್ಬಂದಿ ಸೊಂಟದವರೆಗಿನ ನೀರಿನಲ್ಲಿ ಸಾಗಿ ದೇವಾಲಯದ ದೈನಂದಿನ ಕಾರ್ಯನಿರ್ವಹಿಸಿದರು.
ಗುರುವಾರ ರಾತ್ರಿಯಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಹೊಳೆ, ತೋಡುಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದ ಹಿನ್ನೆಲೆಯಲ್ಲಿ ಅಂಗನವಾಡಿ, ಮದ್ರಸಾ ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ರಜೆ ಸಾರಿದ್ದರು. ಜಿಲ್ಲೆಯ ಮೊಗ್ರಾಲ್‌ಹೊಳೆ, ನೀಲೇಶ್ವರ, ಉಪ್ಪಳ, ಹೊಸಂಗಡಿ, ಮಂಜೇಶ್ವರ ಹೊಳೆಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ.
ರಸ್ತೆಯಲ್ಲಿ ಬಿರುಕು, ಹಾನಿ
ಕಾಸರಗೋಡು ಚಂದ್ರಗಿರಿ ರಸ್ತೆಯ ಪಿಲಿಕುಂಜೆ ಬಳಿ ಕೆಎಸ್‌ಟಿಪಿ ರಸ್ತೆ ಸನಿಹದ ಗುಡ್ಡ ಕುಸಿದಿದ್ದು, ಸನಿಹದ ಎನ್‌ಜಿಒ ಹೋಂನಲ್ಲಿ ವಾಸಿಸುತ್ತಿದ್ದ 20 ಮಂದಿ ಸರ್ಕಾರಿ ಉದ್ಯೋಗಿಗಳನ್ನು ಸನಿಹದ ನುಳ್ಳಿಪ್ಪಾಡಿಯ ಸರ್ಕಾರಿ ಯುಪಿ ಶಾಲೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಚೆರ್ಕಳ ಸನಿಹ ಕುಂಡಡ್ಕದಲ್ಲಿ ಷಟ್ಪಥ ಕಾಮಗಾರಿ ನಡೆಯುತ್ತಿರುವ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆಸುಪಾಸಿನ 20ಕ್ಕೂ ಹೆಚ್ಚು ಮನೆಗಳಲ್ಲಿ ವಾಸಿಸುತ್ತಿರುವವರಲ್ಲಿ ಆತಂಕ ಮನೆ ಮಾಡಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಇತರ ಕಂದಾಯಾಧಿಕಾರಿಗಳು, ಪೊಲೀಸರು ಭೇಟಿ ನೀಡಿದರು.
ಉಳ್ಳಾಲಬೈಲ್ ತೇಲಿ ಹೋದ ಕಾರುಗಳು
ಉಳ್ಳಾಲಬೈಲ್‌ನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳು ನೀರಿನಲ್ಲಿ ತೇಲಿ ಹೋಗಿವೆ. ಕುಂಪಲ ಬೈಪಾಸ್‌ನಲ್ಲಿ ಇದೇ ಮೊದಲ ಬಾರಿಗೆ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಅದೇ ಪ್ರದೇಶದಲ್ಲಿ ಥಾರ್ ಮತ್ತು ಬೀಜಾ ಕಾರುಗಳು ನೀರಿನಲ್ಲಿ ತೇಲಿ ಹೋಗಿದ್ದಲ್ಲದೆ, ರಸ್ತೆಯಲ್ಲಿ ಬಂದು ಬಿದ್ದಿದೆ. ಇದು ಮಳೆಯ ತೀವ್ರತೆ ಎಷ್ಟಿತ್ತು ಎನ್ನುವುದನ್ನು ಸೂಚಿಸುತ್ತಿದೆ.
ಉಳ್ಳಾಲಬೈಲಿನಲ್ಲಿ ಅಪಾರ್ಟೆಂಟ್ ಸೇರಿದಂತೆ ಹಲವು ಕಡೆಗಳಲ್ಲಿ ನೀರು ನಿಂತಿದೆ. ಪಿಲಾರ್, ಸೋಮೇಶ್ವರದಲ್ಲಿ ಮನೆಗಳು ಅರ್ಧಕ್ಕೆ ಮುಳುಗಡೆಯಾಗಿವೆ. ಹಿರಿಯರು ಹೇಳುವ ಪ್ರಕಾರ, ಇಷ್ಟೊಂದು ಮಳೆ ನೀರು ಬಂದಿದ್ದನ್ನು ಈ ಹಿಂದೆ ನೋಡಿದ್ದಿಲ್ಲ. ಇತಿಹಾಸದಲ್ಲಿ ಕಂಡರಿಯದಷ್ಟು ಮಳೆಯಾಗಿದೆ.