ಮಧುಗಿರಿ: ಭೀಕರ ಅಪಘಾತಕ್ಕೆ ಆರು ಮಂದಿ ಬಲಿ

1
Published on

ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು | ಟ್ರಕ್​ ಹಿಂದಿಕ್ಕುವ ಭರದಲ್ಲಿ ಅವಘಡ

ವಿಜಯವಾಣಿ ಸುದ್ದಿಜಾಲ ಮಧುಗಿರಿ
ಕಾರುಗಳ ನಡುವೆ ಭಾನುವಾರ ಸಂಜೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಒಂದೇ ಕುಟುಂಬದ ಮೂವರು ಸೇರಿ 6 ಜನರು ದಾರುಣವಾಗಿ ಮೃಪಟ್ಟಿದ್ದಾರೆ. ತಾಲೂಕಿನ ಕಾಟಗಾನಹಟ್ಟಿ ಹಾಗೂ ಕೆರೆಗಳಪಾಳ್ಯ ಸಮೀಪ ಸಂಜೆ 7.30ರಲ್ಲಿ ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದ ನಾಗಭೂಷಣ್​ ರೆಡ್ಡಿ ಎಂಬುವವರ ಪತ್ನಿ ಸಿಂಧುಜಾ (30), ಮಗ ವೇದಾಂಷ್​ರೆಡ್ಡಿ (7), ಮಾವ ಜನಾರ್ದನ ರೆಡ್ಡಿ (62), ಚಾಲಕ ಆನಂದ್​ (30) ಹಾಗೂ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಕಾರೇನಹಳ್ಳಿಯ ಸಿದ್ದಗಂಗಪ್ಪ (34), ನಾಗರಾಜು (30) ಮೃತಪಟ್ಟಿದ್ದಾರೆ.


ಹಬ್ಬದ ಸಂಭ್ರಮದಲ್ಲಿ ಸೂತಕ: ಎತ್ತಿನಹಳ್ಳಿಯ ನಾಗಭೂಷಣ್​ ರೆಡ್ಡಿ ಬೆಂಗಳೂರಿನ ಜಿಪಿ ನಗರದಲ್ಲಿ ವಾಸವಿದ್ದು, ಸಿಮೆನ್ಸ್​ ಸಾಫ್ಟ್​ವೇರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬ ನಗರದಿಂದ ಗೌರಿ&ಗಣೇಶ ಹಬ್ಬಕ್ಕೆ ಎತ್ತಿನಹಳ್ಳಿಗೆ ಬಂದಿತ್ತು. ಹಬ್ಬದ ಸಂಭ್ರಮದಲ್ಲೇ ಬೆಂಗಳೂರಿಗೆ ಸಿಯಾಜ್​ ಕಾರಿನಲ್ಲಿ ತೆರಳುತ್ತಿತ್ತು. ಈ ವೇಳೆ ಕಾರು, ಟ್ರಕ್​ವೊಂದನ್ನು ಹಿಂದಿಕ್ಕುವ ಬರದಲ್ಲಿ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಯಾಗಿದ್ದೇ ಅವಡಕ್ಕೆ ಕಾರಣ ಎನ್ನಲಾಗಿದ್ದು, ಟಿಯಾಗೊ ಕಾರಿನಲ್ಲಿದ್ದ ನಾಗರಾಜು, ಸಿದ್ದಗಂಗಪ್ಪ ಮೃತಪಟ್ಟಿದ್ದಾರೆ.
ಮೂವರಿಗೆ ಗಂಭೀರ ಗಾಯ: ಸಿಯಾಜ್​ ಕಾರಿನಲ್ಲಿದ್ದ ಎತ್ತಿನಹಳ್ಳಿಯ ಗೀತಾಲಕ್ಷ್ಮೀ (38) ಹಾಗೂ ಯೋಧ ಕಿರಣ್​ಮಯಿ ರೆಡ್ಡಿ, ಸಿಂಧೂಜಾ ಅವರ ಒಂದು ವರ್ಷದ ಮಗ ತ್ರಯಾಂಶ್​ಗೆ ಗಂಭೀರಗಾಯಗಳಾಗಿದ್ದು, ನಾಲ್ವರನ್ನು ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತದೇಹಗಳನ್ನು ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿಡಲಾಗಿದೆ. ಸ್ಥಳಕ್ಕೆ ಆಗಮಿಸಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳಕ್ಕೆ ಎಸ್ಪಿ ದೌಡು: ಕಾರುಗಳ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಮಧುಗಿರಿ ಉಪವಿಭಾಗ ಡಿವೈಎಸ್ಪಿ ರಾಮಚಂದ್ರಪ್ಪ ದೌಡಾಯಿಸಿದ್ದು, ಟನೆ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು. ಮಧುಗಿರಿ ಠಾಣೆ ಸಿಪಿಐ ಹನುಮಂತರಾಯಪ್ಪ, ಪಿಎಸ್​ಐ ವಿಜಯಕುಮಾರ್​ ರಸ್ತೆಯಲ್ಲಿ ನಜ್ಜುಗುಜ್ಜಾಗಿದ್ದ ಕಾರುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಹಬ್ಬಕ್ಕೆ ಬರುತ್ತಿದ್ದವರು ಹೆಣವಾದರು: ಗೌರಿ ಮತ್ತು ಗಣೇಶ ಹಬ್ಬ ಯಾವತ್ತೇ ಬಂದರೂ ಕಾರೇನಹಳ್ಳಿಯಲ್ಲಿ ಸೋಮವಾರದಂದು ಆಚರಿಸುವುದು ವಾಡಿಕೆ. ಬೆಂಗಳೂರಿನ ಫೈನಾನ್ಸ್​​​ ಕಂಪನಿಯಲ್ಲಿ ಕೆಲಸ ಮಾಡುವ ನಾಗರಾಜು ತನ್ನ ಸ್ನೇಹಿತ ಗಾರೆ ಕೆಲಸ ಮಾಡುವ ಸಿದ್ದಗಂಗಪ್ಪ ಜತೆಯಲ್ಲೇ ಊರಿಗೆ ಹಬ್ಬ ಆಚರಿಸಲು ಬರುತ್ತಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net