ಸೋರುತ್ತಿದೆ ಮಧುಗಿರಿ ಪಿಡಬ್ಲ್ಯೂಡಿ ಕಚೇರಿ

20 MDG 02a
Published on

ಮಧುಗಿರಿ: ಮಧುಗಿರಿ ಅಭಿವೃದ್ಧಿಗೆ ಮಾದರಿಯಾಗಬೇಕಿದ್ದ ಪಿಡಬ್ಲ್ಯೂಡಿ ಕಟ್ಟಡ ಉದ್ಘಾಟನೆಗೊಂಡ ಒಂದೂವರೆ ತಿಂಗಳಿಗೆ ಸೋರುತ್ತಿದೆ.

ಪಟ್ಟಣದ ಶಿರಾಗೇಟ್ ವೃತ್ತದಲ್ಲಿ ಶಿರಾ ಮುಖ್ಯರಸ್ತೆ ಪಕ್ಕದಲ್ಲೇ 3.50 ಕೋಟಿ ರೂಪಾಯಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವಿಭಾಗ ಕಚೇರಿ ನಿರ್ಮಿಸಿದ್ದು, ನೂತನ ಕಟ್ಟಡವು 1232 ಚದರ ಅಡಿಗಳ 2 ಮಹಡಿ ಒಳಗೊಂಡಿದೆ.

ಕೆಳ ಹಂತದಲ್ಲಿ ಲೋಕೋಪಯೋಗಿ ವಿಭಾಗೀಯ ಕಚೇರಿ ಮತ್ತು ಮೇಲ್ಭಾಗದಲ್ಲಿ ಸಹಾಯಕ ಕಾರ್ಯಪಾಲಕ ಕಚೇರಿ ಕೆಲಸ ನಿರ್ವಹಿಸಲಿದ್ದು, ವಾರದಿಂದ ಸುರಿಯುತ್ತಿರುವ ಮಳೆಗೆ ಸೋರುತ್ತಿದೆ. ಮುಖ್ಯದ್ವಾರದ ಮೇಲ್ಭಾಗದಲ್ಲೇ ಮಳೆ ನೀರು ತೊಟ್ಟಿಕ್ಕುತ್ತಿದೆ.

ಒಂದು ಭಾಗದಲ್ಲಿ ಸೋರುತ್ತಿದ್ದರೆ ತಾಂತ್ರಿಕ ತೊಂದರೆ ಎನ್ನಬಹುದಿತ್ತು. ಆದರೆ ಕಟ್ಟಡ ಬಹುತೇಕ ಕೊಠಡಿಗಳಲ್ಲಿ ಮೇಲ್ಛಾವಣಿಯಲ್ಲಿ ನೀರು ಕಂಡು ಬರುತ್ತಿದ್ದು, ಒಂದು ಕೊಠಡಿಯಲ್ಲಂತೂ ಮೇಲ್ಭಾಗದಿಂದ ನೀರು ಬೀಳುತ್ತಿರುವುದಕ್ಕೆ ಕಚೇರಿ ಸಿಬ್ಬಂದಿ ಕೆಳಭಾಗದಲ್ಲಿ ಗೋಣಿ ಚೀಲ ಇಟ್ಟಿದ್ದಾರೆ.

ಡಿಸಿಎಂ ಕಾರಜೋಳ ಉದ್ಘಾಟನೆ: ಕೊಠಡಿಯನ್ನು ಜೂ.12ರಂದು ಡಿಸಿಎಂ ಗೋವಿಂದ ಕಾರಜೋಳ ಉದ್ಘಾಟಿಸಿದ್ದರು. ಉದ್ಘಾಟನೆಗೊಂಡ ಒಂದೂವರೆ ತಿಂಗಳಿಗೆ ಕಟ್ಟಡ ಸೋರುತ್ತಿದೆ.

ಇತರ ಇಲಾಖೆಗಳ ಕಟ್ಟಡ ಕಾಮಗಾರಿ ನಿರ್ಮಿಸುವ ಪಿಡಬ್ಲ್ಯೂಡಿ ಇಲಾಖೆ ಕಟ್ಟಡವು ಉದ್ಘಾಟನೆಗೊಂಡ ಒಂದೂವರೆ ತಿಂಗಳಿಗೆ ಸೋರುತ್ತಿರುವುದು ಗಂಭೀರ ವಿಚಾರ. ಇದು ಕಳಪೆ ಕಾಮಗಾರಿಗೆ ಕನ್ನಡಿ ಹಿಡಿದಂತಿದೆ. ಬಿ.ನಾಗೇಶ್ ಬಾಬು ತುಮುಲ್ ಮಾಜಿ ಅಧ್ಯಕ್ಷ ತುರಾತುರಿಯಲ್ಲಿ ಶಿರಾಗೇಟ್ ಸಮೀಪ ನಿರ್ಮಿಸಿರುವ ಪಿಡಬ್ಲ್ಯೂಡಿ ಕಟ್ಟಡ ಉದ್ಘಾಟಿಸಿದ್ದು, ಮೇಲ್ಭಾಗದಲ್ಲಿ ಸಮರ್ಪಕವಾಗಿ ಸಿಮೆಂಟ್ ಹಾಕದಿರುವುದರಿಂದ ಕಟ್ಟಡ ಸೋರುತ್ತಿದ್ದು, ಸಂಬಂಧಪಟ್ಟವರ ಗಮನಕ್ಕೆ ತಂದು ಸರಿಪಡಿಸಲಾಗುವುದು. ಹೊನ್ನೇಶಪ್ಪ ಎಇಇ, ಪಿಡಬ್ಲ್ಯೂಡಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net