

ಮಧುಗಿರಿ: ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದ ಬೆನ್ನಲ್ಲೇ, ತುಮಕೂರು ಜಿಲ್ಲೆಯ 4 ತಾಲೂಕುಗಳನ್ನು ವಿಭಜಿಸಿ ಮಧುಗಿರಿಯನ್ನು ಜಿಲ್ಲೆಯನ್ನಾಗಿಸಬೇಕೆಂಬ ಕೂಗು ಮತ್ತೆ ಕೇಳಿ ಬಂದಿದೆ.
2013ರ ವಿಧಾನಸಭಾ ಚುನಾವಣೆಯ ಸಮಯದಲ್ಲೇ ಕೆ.ಎನ್.ರಾಜಣ್ಣ, ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುತ್ತೇನೆ ಎಂದು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಾಗ ಅದನ್ನು ಯಾರೂ ನಂಬಿರಲಿಲ್ಲ. ಅದಕ್ಕೆ ಕಾರಣಗಳೂ ಇದ್ದವು. ರಸ್ತೆ, ಕುಡಿಯುವ ನೀರು ಸೇರಿ ಮೂಲ ಸೌಕರ್ಯಗಳ ಕೊರತೆಯಿಂದ ವಾಸಕ್ಕೆ ಮಧುಗಿರಿ ಯೋಗ್ಯವೇ ಇಲ್ಲವೆಂಬಂತಿತ್ತು. ಇನ್ನು ಜಿಲ್ಲಾ ಕೇಂದ್ರದ ಮಾತು ದೂರವೇ ಎಂದು ಬಹಳಷ್ಟು ಜನ ಮಾತನಾಡಿಕೊಳ್ಳುತ್ತಿದ್ದರು.
ನಿಜ.. ಆಗಿನ ಪರಿಸ್ಥಿತಿಯೇ ಬೇರೆ. ಆದರೆ 2013ರ ನಂತರದ ಮಧುಗಿರಿಯ ಚಿತ್ರಣವೇ ಬೇರೆ. ತಾಲೂಕು ಶರವೇಗದಲ್ಲಿ ಅಭಿವೃದ್ಧಿ ಹೊಂದಿದ್ದು, ಸಾವಿರಾರು ಕೋಟಿ ರೂಪಾಯಿಯಷ್ಟು ವಿವಿಧ ಅಭಿವೃದ್ಧಿ ಕಾಮಗಾರಿ ನಡೆದಿವೆ. ರಸ್ತೆಗಳು ಡಾಂಬರು ಭಾಗ್ಯ ಕಂಡಿವೆ. ಆರಂಭದಲ್ಲೇ ಕೆರೆಗಳ ಬಗ್ಗೆ ಕಾಳಜಿ ವಹಿಸಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿರಲಿಲ್ಲ. ಹಿಂದೆ ಕೇವಲ 2 ಇದ್ದ ರಾಷ್ಟ್ರೀಕೃತ ಬ್ಯಾಂಕುಗಳ ಸಂಖ್ಯೆ 7ಕ್ಕೆ ಏರಿದೆ. ಏಷ್ಯಾ ಖಂಡದಲ್ಲಿಯೇ ಪ್ರಥಮ ಏಕಶಿಲಾ ಬೆಟ್ಟವೆಂದು ಖ್ಯಾತಿಗಳಿಸಿರುವ ಮಧುಗಿರಿಯ ಏಕಶಿಲಾ ಬೆಟ್ಟಕ್ಕೆ ರೋಪ್‌ವೇ ಅಳವಡಿಸಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಜೆಟ್‌ನಲ್ಲಿ ನೂರು ಕೋಟಿ ರೂಪಾಯಿ ಘೋಷಿಸಿದ್ದು, ಪ್ರವಾಸೋದ್ಯಮ ಇಲಾಖೆ ಅಸಡ್ಡೆಯಿಂದ ಇದು ಟೇಕಾಫ್ ಆಗಿಲ್ಲ.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಹೊರತುಪಡಿಸಿ ಬಹುತೇಕ ಕಚೇರಿಗಳು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಪಟ್ಟಣದ ಅಭಿವೃದ್ಧಿಯ ದೃಷ್ಟಿಯಿಂದ 4 ಪ್ರಮುಖ ಭಾಗಗಳಲ್ಲಿ ಪ್ರಮುಖ ಸರ್ಕಾರಿ ಕಚೇರಿಗಳನ್ನು ಸ್ಥಾಪಿಸಲಾಗಿದೆ. ತುಮಕೂರು ರಸ್ತೆಯಲ್ಲಿ ಹೈಕೋರ್ಟ್ ಮಾದರಿಯಲ್ಲಿ ನೂತನ ನ್ಯಾಯಾಲಯ ಸಂಕೀರ್ಣ, ಶಿರಾ ರಸ್ತೆಯಲ್ಲಿ ನೂತನ ತಾಪಂ ಕಚೇರಿ, ಪಿಡಬ್ಲ್ಯೂಡಿ ಕಚೇರಿ, ಗೌರಿಬಿದನೂರು ರಸ್ತೆಯಲ್ಲಿ ಎಆರ್‌ಟಿಒ ಕಚೇರಿ, ಪಾಡಗಡ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣ ಮಾಡಲಾಗಿದೆ. ಪಟ್ಟಣದಲ್ಲಿ 53 ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿಯೂ ನಡೆಯುತ್ತಿದೆ.
ಬೆಳಗಾವಿ ಜಿಲ್ಲೆ ನಂತರ 10 ತಾಲೂಕುಗಳನ್ನೊಳಗೊಂಡ ತುಮಕೂರು ಅತೀ ದೊಡ್ಡ ಜಿಲ್ಲೆಯಾಗಿದ್ದು, ಆಂಧ್ರ ಗಡಿಗೆ ಹೊಂದಿಕೊಂಡಿರುವ ಮಧುಗಿರಿ, ಶಿರಾ, ಕೊರಟಗೆರೆ, ಪಾವಗಡ ತಾಲೂಕುಗಳನ್ನು ಸೇರಿಸಿ ಮಧುಗಿರಿಯನ್ನು ಜಿಲ್ಲೆಯನ್ನಾಗಿ ಘೋಷಿಸಿದಲ್ಲಿ ಬರ ಪೀಡಿತ ಪ್ರದೇಶಗಳ ಅಭಿವೃದ್ಧಿಯ ಕನಸು ನನಸಾಗಲಿದೆ. ಇದು ಕೈಗೂಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಎತ್ತಿನಹೊಳೆ ಯೋಜನೆ: ಕುಡಿಯುವ ನೀರಿನ ಬರ ನೀಗಿಸುವ ಎತ್ತಿನಹೊಳೆ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಯೋಜನೆ ಪೂರ್ಣಗೊಂಡಲ್ಲಿ ತಾಲೂಕಿನ 53 ಕೆರೆಗಳಿಗೂ ನೀರು ಹರಿಯಲಿದೆ. 50 ಕೋಟಿ ರೂಪಾಯಿ ವೆಚ್ಚದ ಯುಜಿಡಿ ಕಾಮಗಾರಿ ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಕೆಲಸ ಅರಂಭವಾಗಿ ಪಟ್ಟಣದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ.
ಕೈಗಾರಿಕಾ ಪ್ರದೇಶ: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ ಒತ್ತಾಸೆಯಂತೆ ಅಂದು ಕುಮಾರಸ್ವಾಮಿ ಅವರು ಬಜೆಟ್‌ನಲ್ಲಿ ಮಧುಗಿರಿಯನ್ನು ಕೈಗಾರಿಕಾ ಪ್ರದೇಶವನ್ನಾಗಿಸುವುದಾಗಿ ಘೋಷಿಸಿದ್ದರು.
ಮಧುಗಿರಿಯನ್ನು ಜಿಲ್ಲೆಯನ್ನಾಗಿ ಮಾಡಬೇಕೆಂಬ ಬಲವಾದ ಕೂಗು ಕೇಳಿ ಬರುತ್ತಿದ್ದು, ವಿಜಯನಗರ ಘೋಷಿಸಿದಂತೆ ಗಡಿಭಾಗದ ತಾಲೂಕುಗಳ ಅಭಿವೃದ್ಧಿ ನಿಟ್ಟಿನಲ್ಲಿ ಮಧುಗಿರಿ ಕೇಂದ್ರವಾಗಿಟ್ಟುಕೊಂಡು ಜಿಲ್ಲೆಯನ್ನಾಗಿ ಘೋಷಿಸಬೇಕು. ಎನ್.ಗಂಗಣ್ಣ, ರಾಜ್ಯ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ