ಟ್ಯಾಕ್ಸಿ ಚಾಲಕರ ಮೇಲೆ ದಂಡಾಸ ; ಗಡಿ ದಾಟಲು ಹೆದರುವ ಚಾಲಕರು ; ಸೀಮಾಂಧ್ರ ಆರ್‌ಟಿಒಗಳಿಗಿಲ್ಲ ಕಡಿವಾಣ

IMG-20220404-WA0009
Published on

ಮಧುಗಿರಿ : ಹಲವು ವರ್ಷಗಳಿಂದಲೂ ಮಧುಗಿರಿ-ಪಾವಗಡ ಗಡಿ ಭಾಗದಲ್ಲಿ ರಾಜ್ಯದ ಟ್ಯಾಕ್ಸಿ ಚಾಲಕರು ಸೀಮಾಂಧ್ರದ ಆರ್‌ಟಿಒಗಳಿಗೆ ಹೆದರಿ ಭಯದಲ್ಲೇ ಸಂಚರಿಸಬೇಕಾದ ಅನಿವಾರ್ಯತೆಯಿದೆ.

ಮಧುಗಿರಿ-ಪಾವಗಡ ರಸ್ತೆಯು ಸುಮಾರು 52 ಕಿಮೀ ಇದ್ದು, ಈ ಭಾಗದ ರಸ್ತೆಯಲ್ಲಿ ಸಂಚರಿಸುವಾಗ ಪಾವಗಡ ತಲುಪಲು ರಾಜ್ಯದ ಚಂದ್ರಬಾವಿ ಗೇಟ್‌ನಿಂದ ರಾಜವಂತಿವರೆಗೂ 16 ಕಿ.ಮೀ ಸೀಮಾಂಧ್ರ ಪ್ರದೇಶದಲ್ಲಿ ಹಾದು ಹೋಗಬೇಕು. ಈ ಭಾಗದಲ್ಲಿ ಸಂಚರಿಸುವಾಗ ರಾಜ್ಯದ ಟ್ಯಾಕ್ಸಿ ಚಾಲಕರು ಸೀಮಾಂಧ್ರದ ಆರ್‌ಟಿಒ ಅಧಿಕಾರಿಗಳಿಂದ ನಿತ್ಯ ಕಿರುಕುಳ ಅನುಭವಿಸುತ್ತಿದ್ದು, ರಾಜ್ಯ ದಾಟುತ್ತಿದ್ದಂತೆ ಸೀಮಾಂಧ್ರದ ಗಡಿ ಭಾಗದಲ್ಲಿ ಅಲ್ಲಿನ ಆರ್‌ಟಿಒ ಅಧಿಕಾರಿಗಳು ಕಾಯುತ್ತಿದ್ದು, ಅವರ ಕೈಗೆ ರಾಜ್ಯದ ಹಳದಿ ನಂಬರ್ ಪ್ಲೇಟ್‌ಗಳ ಟ್ಯಾಕ್ಸಿಗಳು ಸಿಕ್ಕಲ್ಲಿ ಮನಸ್ಸಿಗೆ ಬಂದಂತೆ ದಂಡ ಹಾಕುತ್ತಾರೆ. ಸಿಕ್ಕ ಬಾಡಿಗೆಯನ್ನೆಲ್ಲ ದಂಡದ ರೂಪದಲ್ಲಿ ತೆತ್ತು ವಾಪಾಸಾಗಬೇಕಾದ ಅನಿವಾರ್ಯತೆ ರಾಜ್ಯದ ಟ್ಯಾಕ್ಸಿ ಚಾಲಕರದ್ದಾಗಿದೆ.

ಸೀಮಾಂಧ್ರದ ಆರ್‌ಟಿಒ ಅಧಿಕಾರಿಗಳಿಗೆ ಸಿಕ್ಕಿ ಬಿದ್ದು, ದುಬಾರಿ ದಂಡ ತೆರಬೇಕು ಎಂಬ ಭಯದಲ್ಲಿ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗಿ ಅಪಘಾತಗಳಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಬಹುತೇಕ ಟ್ಯಾಕ್ಸಿ ಚಾಲಕರು ಈ ಭಾಗದ ಬಾಡಿಗೆ ಸಹವಾಸವೇ ಬೇಡ ಎಂದು ಕೈ ಮುಗಿಯುತ್ತಾರೆ.

ಅವರಿಗಿಲ್ಲದ ಭಯ ನಮಗೇಕೆ : ವಿಪರ್ಯಾಸವೆಂದರೆ ಸೀಮಾಂಧ್ರದ ಟ್ಯಾಕ್ಸಿ ವಾಹನಗಳು ರಾಜ್ಯದ ಗಡಿಯೊಳಗೆ ಭಯವಿಲ್ಲದೆ ಸಂಚರಿಸುತ್ತಿದ್ದರೂ ನಮ್ಮ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಏಕೆ..? ಅವರಿಗಿಲ್ಲದ ಭಯ ನಮಗೆ ಮಾತ್ರ ಏಕೆ...? ತುಮಕೂರು, ಮಧುಗಿರಿ ಭಾಗದಲ್ಲಿ ಎಆರ್‌ಟಿಒ ಕಚೇರಿಗಳಿದ್ದೂ ಇಷ್ಟು ವರ್ಷಗಳಾದರೂ ಸಮಸ್ಯೆ ಜೀವಂತವಾಗಿರುವುದು ಎಷ್ಟು ಸರಿ ಎನ್ನುತ್ತಾರೆ ರಾಜ್ಯದ ಟ್ಯಾಕ್ಸಿ ಚಾಲಕರು. ಮಧುಗಿರಿ ತಾಲೂಕಿನ ಸರ್ಕಾರಿ ಕಚೇರಿಯೊಂದರ ಅಧಿಕಾರಿಗಳು ಆಂಧ್ರದ ಟ್ರ್ಯಾಕ್ಟರ್‌ಗಳನ್ನು ಯಾವುದೇ ಪರ್ಮಿಟ್ ಪಡೆಯದೆ ರಾಜ್ಯದೊಳಗೆ ಹೂಳೆತ್ತಲು ಬಳಸಿಕೊಳ್ಳುತ್ತಿರುವುದು ರಹಸ್ಯವಾಗಿ ಉಳಿದಿಲ್ಲ.

ಮೋಟಾರು ವಾಹನ ಕಾಯ್ದೆಯಲ್ಲೇನಿದೆ? : ಸ್ಥಳ ಹಾಗೂ ತಲುಪಬೇಕಾದ ಸ್ಥಳ ಒಂದೇ ರಾಜ್ಯದಲ್ಲಿದ್ದು, ಮಧ್ಯೆ ಬೇರೆ ರಾಜ್ಯದ ಸರಹದ್ದು, ಬಂದರೆ 16 ಕಿ.ಮೀ ವ್ಯಾಪ್ತಿಯೊಳಗೆ ಯಾವುದೇ ವಾಹನ ಸಂಚರಿಸಲು ಕೇಂದ್ರ ಮೋಟಾರು ಕಾಯ್ದೆ 1988 ರ ಕಲಂ 88 (1)ರಲ್ಲಿ ಅವಕಾಶವಿದೆ. ಆದರೆ, ಈ ನಿಯಮವನ್ನು ಸೀಮಾಂಧ್ರದ ಆರ್‌ಟಿಒ ಅಧಿಕಾರಿಗಳು ಗಾಳಿಗೆ ತೂರಿದ್ದು, ಟ್ಯಾಕ್ಸಿ ಚಾಲಕರು ರಾಜ್ಯದ ಗಡಿ ದಾಟಿದ ನಂತರ ಸುಮಾರು 16 ಕಿಮೀ ದೂರ ಯಾವ ಸಮಯದಲ್ಲಿ ಆರ್‌ಟಿಒ ಅಧಿಕಾರಿಗಳು ಬಂದು ವಾಹನ ಅಡ್ಡಗಟ್ಟುತ್ತಾರೋ ಎಂಬ ಭಯದಲ್ಲೇ ಓಡಾಡುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಮನಹರಿಸಿ ರಾಜ್ಯದ ಟ್ಯಾಕ್ಸಿ ಚಾಲಕರಿಗೆ ನ್ಯಾಯ ಒದಗಿಸಬೇಕಿದೆ.

ಪಾವಗಡಕ್ಕೆ ತೆರಳಲು ಚಂದ್ರಭಾವಿ ಗಡಿ ದಾಟಿದ ನಂತರ ಸೀಮಾಂಧ್ರದ ಮಡಕಶಿರಾ ಮೂಲಕ ಹಾದು ಹೋಗಬೇಕು. ಆದರೆ ಸೀಮಾಂಧ್ರ ಭಾಗದಲ್ಲಿ ಸಂಚರಿಸುವಾಗ ಆರ್‌ಟಿಒ ಅಧಿಕಾರಿಗಳು ಇನ್ನಿಲ್ಲದ ದಾಖಲೆಗಳನ್ನು ಕೇಳುತ್ತಿದ್ದು, ಇವರ ಕಿರುಕುಳ ಬಹಳಷ್ಟಿದೆ. ಬಲರಾಮಯ್ಯ, ಟ್ಯಾಕ್ಸಿ ಮಾಲೀಕ ಮಧುಗಿರಿ ರಾಜ್ಯದ ಚಂದ್ರಭಾವಿ ದಾಟಿದ ನಂತರ ಸೀಮಾಂಧ್ರದ ಮಡಕಶಿರಾ ತಾಲೂಕಿನ ಮೂಲಕ ಪಾಡಗಡಕ್ಕೆ ಹೋಗಬೇಕಿದ್ದು, ಇಲ್ಲಿನ ಅಧಿಕಾರಿಗಳು ರಾಜ್ಯದ ಹಳದಿ ವಾಹನಗಳನ್ನು ಕಂಡರೆ ನಿಲ್ಲಿಸಿ ಪರ್ಮಿಟ್ ವಿಚಾರಿಸುತ್ತಾರೆ. ನಾವು ಪಾವಗಡಕ್ಕೆ ಹೋಗುತ್ತಿದ್ದೇವೆ ಎಂದರೂ ಕೇಳದೆ ಅವರಿಗಿಷ್ಟ ಬಂದಂತೆ ದಂಡ ವಿಧಿಸುತ್ತಾರೆ. ತಿಮ್ಮರಾಜು, ಚಾಲಕ, ಸಿದ್ದಾಪುರ ರಾಜ್ಯದ ಗಡಿ ದಾಟಿದ ನಂತರ ಸೀಮಾಂಧ್ರದಲ್ಲಿ ಅಲ್ಲಿನ ಆರ್‌ಟಿಒ ಅಧಿಕಾರಿಗಳು ರಾಜ್ಯದ ಟ್ಯಾಕ್ಸಿ ಚಾಲಕರಿಗೆ ಬಹಳಷ್ಟು ಕಿರುಕುಳ ನೀಡುತ್ತಿರುವುದರ ಜತೆಗೆ ಮನಸಿಗೆ ಬಂದಂತೆ ದಂಡ ವಿಧಿಸುತ್ತಿರುವ ಪ್ರಸಂಗಗಳು ಹೆಚ್ಚಾಗಿ ಕೇಳಿಬರುತ್ತಿವೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು. ತಿಮ್ಮರಾಜು, ಕರುನಾಡ ವಿಜಯ ಸೇನೆ ತಾಲೂಕು ಅಧ್ಯಕ್ಷ ಮಧುಗಿರಿ ಒಂದು ಪ್ರಯಾಣದ ಆರಂಭದ ಸ್ಥಳ ಹಾಗೂ ತಲುಪಬೇಕಾದ ಸ್ಥಳ ಒಂದೇ ರಾಜ್ಯದಲ್ಲಿದ್ದು, ಮಧ್ಯೆ ಬೇರೆ ರಾಜ್ಯದ ಸರಹದ್ದು, ಬಂದರೆ 16 ಕಿಮೀ ವ್ಯಾಪ್ತಿಯೊಳಗೆ ಯಾವುದೇ ವಾಹನ ಸಂಚರಿಸಲು ಕೇಂದ್ರ ಮೋಟಾರು ಕಾಯ್ದೆ 1988ರ ಕಲಂ 88 (1)ರಲ್ಲಿ ಅವಕಾಶವಿದೆ. ಆದರೂ ಸೀಮಾಂಧ್ರದ ಆರ್‌ಟಿಒ ಅಧಿಕಾರಿಗಳು ರಾಜ್ಯದ ಟ್ಯಾಕ್ಸಿಗಳಿಗೆ ದಂಡ ವಿಧಿಸುತ್ತಿರುವ ಆರೋಪಗಳು ಕೇಳಿ ಬರುತ್ತಿದ್ದು, ಇದರ ಬಗ್ಗೆ ಪತ್ರದ ಮೂಲಕ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ದೇವಿಕಾ, ಎಆರ್‌ಟಿಒ ಮಧುಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net