ರಾಜ್ಯದಲ್ಲಿ ವೇಗ ಪಡೆಯದ ರೈಲ್ವೆ ಕಾಮಗಾರಿ ; ಮಂದಗತಿಯಲ್ಲಿ ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ; ಸೀಮಾಂಧ್ರದಲ್ಲಿ ಪ್ರಾಯೋಗಿಕ ರೈಲು ಸಂಚಾರ ಆರಂಭ

IMG_20220204_172719
Published on

ಮಧುಗಿರಿ : ಬಯಲುಸೀಮೆಗೆ ವರದಾನ ಎಂದೇ ಹೇಳಲಾಗುತ್ತಿರುವ ಮಹತ್ವಾಕಾಂಕ್ಷಿ ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಕಾಮಗಾರಿ ಆರಂಭವಾಗಿ 10 ವರ್ಷಗಳೇ ಗತಿಸಿವೆ. ಆದರೆ ಈವರೆಗೂ ಯೋಜನೆ ಹಳಿ ಮೇಲೆ ಹತ್ತಲೇ ಇಲ್ಲ.

ಮಧುಗಿರಿ, ಕೊರಟಗೆರೆ, ಪಾವಗಡ, ತುಮಕೂರು ತಾಲೂಕುಗಳನ್ನು ಸಂಪರ್ಕಿಸುವ ಈ ಯೋಜನೆಯು ಪಾವಗಡದ ನಾಗಲಪುರ ಗಡಿಯಿಂದ ಮಡಕಶಿರಾ ಕೊತ್ತಲಂ ಮೂಲಕ ತುಮಕೂರುವರೆಗೆ 123 ಕಿ.ಮೀ. ಹಬ್ಬಿದೆ. ಈ ಯೋಜನೆಗೆ ಒಟ್ಟು 1,395 ಎಕರೆ, ಅಂದರೆ 1,26,818 ಚದರಡಿ ಜಮೀನಿಗೆ ಬೇಡಿಕೆ ಇದೆ. ಈವರೆಗೆ ಕೇವಲ 992.11 ಎಕರೆ ಅಂದರೆ 52,668.50 ಚದರಡಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇನ್ನೂ 405.35 ಎಕರೆ ಭೂಸ್ವಾಧೀನ ಆಗಬೇಕಾಗಿದ್ದು, ಪ್ರಕ್ರಿಯೆ ವಿಳಂಬವಾಗುತ್ತಿದೆ.

ಮಧುಗಿರಿ ತಾಲೂಕಿನಲ್ಲಿ ಮಂದಗತಿ: ತುಮಕೂರು ತಾಲೂಕಿನಲ್ಲಿ ಒಟ್ಟು 240.14 ಎಕರೆ ಪೈಕಿ 214.2 ಎಕರೆ ಭೂಸ್ವಾಧೀನವಾಗಿದೆ. ಕೊರಟಗೆರೆ ತಾಲೂಕಿನಲ್ಲಿ 231.65 ಎಕರೆ ಪೈಕಿ 175.26 ಎಕರೆ, ಮಧುಗಿರಿ ತಾಲೂಕಿನಲ್ಲಿ 478.18 ಎಕರೆ ಪೈಕಿ 218.20 ಎಕರೆ, ಪಾವಗಡ ತಾಲೂಕಿನಲ್ಲಿ ಒಟ್ಟು 447.15 ಎಕರೆ ಭೂಮಿ ಗುರುತಿಸಲಾಗಿದ್ದು, 394.2 ಎಕರೆ ಸ್ವಾಧೀನವಾಗಿದೆ.

ಇಚ್ಛಾಶಕ್ತಿ ಕೊರತೆ: ಅಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರ ತುಮಕೂರು-ರಾಯದುರ್ಗಕ್ಕೆ 206 ಕಿ.ಮೀ. ಉದ್ದದ ಮಾರ್ಗಕ್ಕಾಗಿ 2012ರಲ್ಲೇ 1,850 ಕೋಟಿ ರೂ. ಬಿಡುಗಡೆ ಮಾಡಿತ್ತು. ರಾಜ್ಯದಲ್ಲಿ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ರಾಜ್ಯದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಇದಕ್ಕೆ ಕಾರಣ ಎಂಬ ಆರೋಪವಿದೆ.

123 ಕಿ.ಮೀ.ನಲ್ಲಿ 16 ನಿಲ್ದಾಣ : ತುಮಕೂರು-ರಾಯದುರ್ಗ ರೈಲ್ವೆ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಇಲ್ಲೆಲ್ಲ ಟಿಕೆಟ್ ಕೌಂಟರ್, 144 ರೈಲ್ವೆ ಕೆಳಸೇತುವೆ, 32 ಬೃಹತ್ ಸೇತುವೆಗಳು, 41 ಮೇಲ್ಸೇತುವೆಗಳು, 269 ಸಣ್ಣ ಸೇತುವೆಗಳು ನಿರ್ಮಾಣಗೊಳ್ಳಬೇಕಿದೆ. ಮಧುಗಿರಿಯ ಬಿ.ಸಿ.ಪಾಳ್ಯ ಸಮೀಪ ರೈಲ್ವೆ ನಿಲ್ದಾಣ ಕಾಮಗಾರಿ ಕೈಗೊಳ್ಳಲಾಗಿದೆಯಾದರೂ ಕಾಮಗಾರಿ ಕುಂಟುತ್ತಿದೆ.

ಪ್ರಾಯೋಗಿಕ ರೈಲು ಸಂಚಾರ ; ತುಮಕೂರು-ರಾಯದುರ್ಗ ಮಧ್ಯೆ ಒಟ್ಟು 206 ಕಿಮೀ ಅಂತರವಿದೆ. ಈ ಪೈಕಿ, ಸೀಮಾಂಧ್ರ ವ್ಯಾಪ್ತಿಯಲ್ಲಿ ರೈಲು 84 ಕಿಮೀ ಸಂಚರಿಸಲಿದ್ದರೆ, ಕರ್ನಾಟಕದ ವ್ಯಾಪ್ತಿಯಲ್ಲಿ 113 ಕಿಮೀ ಸಂಚರಿಸುತ್ತದೆ. ಸೀಮಾಂಧ್ರದಲ್ಲಿ 84 ಕಿಮೀ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿ, 49 ಕಿಮೀ ಮಾರ್ಗದ ಕಾಮಗಾರಿ ಪೂರ್ಣಗೊಳಿಸಲಾಗಿದೆ. 35 ಕಿಮೀ (ಕಂಬದೂರುವರೆಗೆ) ಕಾಮಗಾರಿ ಬಾಕಿ ಇದೆ. 2018ರಲ್ಲೇ ಕದರಿ ದೇವರಪಲ್ಲಿವರೆಗೆ ಕಾಮಗಾರಿ ಪೂರ್ಣಗೊಂಡಿದ್ದು, ಒಟ್ಟು 54 ಕಿಮೀ ಮಾರ್ಗದಲ್ಲಿ ರೈಲಿನ ಪ್ರಾಯೋಗಿಕ ಸಂಚಾರವಾಗಿದೆ.

ರಾಜ್ಯದಲ್ಲಿ ನನೆಗುದಿಗೆ ಬಿದ್ದ ಯೋಜನೆ ; ಕರ್ನಾಟಕದಲ್ಲಿ ರಾಯದುರ್ಗ-ಕಲ್ಯಾಣದುರ್ಗ ನಡುವಿನ 40 ಕಿಮೀ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಬಾಕಿ 93 ಕಿಮೀ ಕಾಮಗಾರಿ ನನೆಗುದಿಗೆ ಬಿದ್ದಿದೆ.

ತುಮಕೂರು-ರಾಯದುರ್ಗ ರೈಲ್ವೆ ಕಾಮಗಾರಿ ಪ್ರಗತಿಯಲ್ಲಿವೆ. ಹಂತ-ಹಂತವಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತಿದೆ. ಕಂದಾಯ ಇಲಾಖೆ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸಿಕೊಟ್ಟರೆ, ಕಾಮಗಾರಿಯೂ ಚುರುಕಾಗುತ್ತದೆ. ಧರ್ಮಪಾಲ್, ತುಮಕೂರು ರೈಲ್ವೆ ವಿಶೇಷ ಭೂಸ್ವಾಧೀನಾಧಿಕಾರಿ ರೈಲ್ವೆ ಯೋಜನೆಗಾಗಿ ಜಮೀನು ಭೂಸ್ವಾಧೀನ ಮಾಡಿಕೊಳ್ಳುವುದಾಗಿ ರೈಲ್ವೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಈವರೆಗೂ ಸ್ವಾಧೀನ ಪ್ರಕ್ರಿಯೆ ನಡೆಸಿಲ್ಲ. ಒಂದು ರೂಪಾಯಿ ಪರಿಹಾರವನ್ನೂ ಕೊಟ್ಟಿಲ್ಲ. ಇದರಿಂದಾಗಿ ಅಲ್ಲಿ ಉಳುಮೆ ಮಾಡಲೂ ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದೇವೆ. ರಾಮಕೃಷ್ಣಪ್ಪ, ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net