ವಿಷಜಂತುಗಳ ತಾಣಗಳಾದ ಇಂಗು ಗುಂಡಿಗಳು ; ನಿರ್ವಹಣೆ ಮಾಡಲು ಪುರಸಭೆ ನಿರ್ಲಕ್ಷ್ಯ

20 MDG 1
Published on

ಮಧುಗಿರಿ : ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪುರಸಭೆಯಿಂದ ನಿರ್ಮಿಸಿರುವ 10ಕ್ಕೂ ಹೆಚ್ಚು ಇಂಗು ಗುಂಡಿಗಳು ನಿರ್ವಹಣೆ ಕೊರತೆಯಿಂದ ತಿಪ್ಪೆಗುಂಡಿಗಳಂತಾಗಿದ್ದು, ಗಿಡಗಂಟಿಗಳು ಬೆಳೆದು ವಿಷ ಜಂತುಗಳ ತಾಣಗಳಾಗಿವೆ.

ಏನಿದು ಇಂಗು ಗುಂಡಿ ?: ನೀರಿಲ್ಲದೆ ಬತ್ತಿ ಹೋಗಿರುವ ಬೋರ್‌ವೆಲ್ಗಳ ಸುತ್ತ ಸುಮಾರು 10*7 ಅಳತೆಯಲ್ಲಿ ಗುಂಡಿಯನ್ನು ತೋಡಿ ಅದಕ್ಕೆ ಕಲ್ಲು ಸಿಮೆಂಟ್ ಬಳಸಿ ಕಟ್ಟೆ ಕಟ್ಟಿ ನಂತರ ಅದಕ್ಕೆ ಜಲ್ಲಿ, ಗುಂಡುಗಳು ಮತ್ತು ಮರಳನ್ನು ಹಾಕುತ್ತಾರೆ. ಇದರಿಂದ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿಯುವ ಮಳೆಯ ನೀರು ಇಂಗಿ ಅಂತರ್ಜಲ ವೃದ್ಧಿಯಾಗುವುದಲ್ಲದೇ ಬೋರ್‌ವೆಲ್ಗಳಲ್ಲಿ ನೀರು ತುಂಬಿಕೊಳ್ಳಲಿದೆ.

ಸುಮಾರು 3 ವರ್ಷಗಳ ಹಿಂದೆ ಅಂದಿನ ಪುರಸಭೆ ಮುಖ್ಯಾಧಿಕಾರಿ ಲೋಹಿತ್ ಅವರು ಇದೇ ತಂತ್ರ ಅನುಸರಿಸಿ ಪಟ್ಟಣದ ವಿವಿಧ ಭಾಗಗಳಲ್ಲಿ ಹಳೆಯ ಬೋರ್ ವೆಲ್ಗಳ ಸುತ್ತ ಒಂದು ಇಂಗು ಗುಂಡಿಗೆ ತಲಾ 70 ಸಾವಿರ ರೂಪಾಯಿ ವೆಚ್ಚದಂತೆ ಹತ್ತಕ್ಕೂ ಹೆಚ್ಚು ಗುಂಡಿಗಳನ್ನು ನಿರ್ಮಿಸಿದ್ದರು. ಇದರಿಂದ ಬೋರ್‌ವೆಲ್ಗಳಲ್ಲಿ ನೀರು ತುಂಬಿಕೊಂಡಿತ್ತು. ಆದರೆ ಈಗ ಪುರಸಭೆ ನಿರ್ಲಕ್ಷ್ಯದಿಂದಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ನಿರ್ಮಿಸಿದ ಇಂಗು ಗುಂಡಿಗಳು ತಿಪ್ಪೆಗುಂಡಿಗಳಂತಾಗಿದ್ದು, ಗುಂಡಿಗಳಲ್ಲಿ ಕಸ ಕಡ್ಡಿಗಳು, ಗಿಡ-ಗಂಟಿಗಳು ತುಂಬಿಕೊಂಡಿದ್ದು, ವಿಷ ಜಂತುಗಳ ತಾಣಗಳಾಗಿವೆ. ಇನ್ನಾದರೂ ಪುರಸಭೆ ಎಚ್ಚೆತ್ತುಕೊಂಡು ಇಂಗುಗುಂಡಿಗಳಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ಸ್ವಚ್ಛಗೊಳಿಸಿ ಇವುಗಳನ್ನು ಬಳಸಿಕೊಳ್ಳಬೇಕಿದೆ.

ಲಕ್ಷಾಂತರ ರೂಪಾಯಿ ವ್ಯಯಿಸಿ ಪುರಸಭೆಯಿಂದ ನಿರ್ಮಿಸಿರುವ ಗುಂಡಿಗಳು ಉಪಯೋಗಕ್ಕೆ ಬಾರದೆ ವಿಷಜಂತುಗಳ ತಾಣಗಳಾಗಿವೆ. ಪುರಸಭೆ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರ ತೆರಿಗೆಯ ಹಣವನ್ನು ವ್ಯಯಿಸಿ ನಿರ್ಮಿಸಿರುವ ಇಂಗು ಗುಂಡಿಗಳು ತಿಪ್ಪೆಗುಂಡಿಗಳಾಗಿವೆ. ತುಂಗೋಟಿ ರಂಗನಾಥ್, ಮಧುಗಿರಿ ನಿವಾಸಿ. ಪಟ್ಟಣದ ವಿವಿಧ ಭಾಗಗಳಲ್ಲಿ ಪುರಸಭೆಯಿಂದ ಮಳೆಯ ನೀರು ಇಂಗಿಸುವ ಉದ್ದೇಶದಿಂದ 10ಕ್ಕೂ ಹೆಚ್ಚು ಇಂಗು ಗುಂಡಿಗಳನ್ನು ನಿರ್ಮಿಸಿದ್ದು, ಆದರೆ ಗಿಡಗಂಟೆಗಳು ಬೆಳೆದು ವಿಷಜಂತುಗಳ ತಾಣಗಳಾಗಿರುವುದು ನಮ್ಮ ಗಮನಕ್ಕೆ ಬಂದಿರಲಿಲ್ಲ. ತಕ್ಷಣವೇ ಎಲ್ಲ ಇಂಗು ಗುಂಡಿಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು. ಸಂಜೀವ ಮೂರ್ತಿ, ಪುರಸಭೆ ಇಂಜಿನಿಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net