

ಮಧುಗಿರಿ: ಮಧುಗಿರಿ ಎಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿದ್ದ ಶಿರಾ ತಾಲೂಕನ್ನು ಮತ್ತೆ ತುಮಕೂರು ಆರ್‌ಟಿಒ ವ್ಯಾಪ್ತಿಗೆ ಒಳಪಡಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಈ ಭಾಗದ ಆದಾಯಕ್ಕೆ ಖೋತಾ ಬಿದ್ದಿದೆ.
ಮಧುಗಿರಿ-ಕೊರಟಗೆರೆ-ಪಾವಗಡ ಮತ್ತು ಶಿರಾ ತಾಲೂಕುಗಳು ಬರಪೀಡಿತ ಪ್ರದೇಶಗಳಾಗಿದ್ದು, ಮಧುಗಿರಿ ಉಪವಿಭಾಗದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಆರಂಭಿಸಿದರೆ ಈ ಭಾಗದಲ್ಲಿ ವ್ಯಾಪಾರ ವಹಿವಾಟಿಗೆ ಅನುಕೂಲವಾಗುತ್ತದೆ ಏಂಬುದನ್ನ ಮನಗಂಡು ಅಂದು ಶಾಸಕರಾಗಿದ್ದ ಕೆ.ಎನ್.ರಾಜಣ್ಣ ಮಧುಗಿರಿಗೆ ಎಆರ್‌ಟಿಒ ಕಚೇರಿ ಮಂಜೂರು ಮಾಡಿಸಿ ಮಧುಗಿರಿ ಉಪವಿಭಾಗದ ವ್ಯಾಪ್ತಿಗೆ ಮಧುಗಿರಿ, ಶಿರಾ, ಕೊರಟಗೆರೆ ಮತ್ತು ಪಾವಗಡ ತಾಲೂಕುಗಳನ್ನು ಸೇರಿಸಿದ್ದರು.
2013ರ ಡಿಸೆಂಬರ್ 30ರಂದು ಅಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಆರ್‌ಟಿಒ ಕಚೇರಿ ಉದ್ಘಾಟಿಸಿದ್ದರು. ಅಂದಿನಿಂದ ಸುಮಾರು 5 ವರ್ಷ ಮಧುಗಿರಿ ಹಿಡಿತದಲ್ಲಿದ್ದ ಶಿರಾ ತಾಲೂಕು ಬದಲಾದ ರಾಜಕೀಯ ಸನ್ನಿವೇಶದಲ್ಲಿ 2017ರಲ್ಲಿ ಮತ್ತೆ ತುಮಕೂರು ವ್ಯಾಪ್ತಿಗೆ ಸೇರಿಸಿ ಸರ್ಕಾರ ಆದೇಶ ಹೊರಡಿಸಿತ್ತು.
2018ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಶಾಸಕ ಎಂ.ವಿ.ವೀರಭದ್ರಯ್ಯ ಮತ್ತೆ ಶಿರಾ ತಾಲೂಕನ್ನು ಮಧುಗಿರಿ ಸಾರಿಗೆ ಇಲಾಖೆ ವ್ಯಾಪ್ತಿಗೆ ತರುವಲ್ಲಿ ಯಶಸ್ವಿಯಾಗಿದ್ದರು. ರಾಜಕೀಯ ಏರುಪೇರುಗಳ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಶಿರಾ ತಾಲೂಕನ್ನು ತುಮಕೂರು ವ್ಯಾಪ್ತಿಗೆ ಸೇರಿಸಲು ಒತ್ತಡಗಳಿದ್ದವಾದರೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಮೇಲಿನ ಋಣಭಾರಕ್ಕೆ ಒಂದೂವರೆ ವರ್ಷ ಯಾವುದೇ ಕ್ರಮ ಕೈಗೊಳ್ಳದೆ ತಟಸ್ಥವಾಗಿದ್ದ ಬಿಜೆಪಿ ಸರ್ಕಾರ ಶಿರಾ ಉಪ ಚುನಾವಣೆಯ ನಂತರ ಈಗ ಏಕಾಏಕಿ ತುಮಕೂರು ವ್ಯಾಪ್ತಿಗೆ ಸೇರಿಸಿ ಆದೇಶ ಹೊರಡಿಸಿದೆ.
ಶಿರಾ ಏಕೆ ಅಚ್ಚುಮೆಚ್ಚು?: ತುಮಕೂರು ಪ್ರಾದೇಶಿಕ ಸಾರಿಗೆ ವ್ಯಾಪ್ತಿಯಲ್ಲಿ ತುಮಕೂರು ನಗರ, ಗ್ರಾಮಾಂತರ, ಕುಣಿಗಲ್, ಗುಬ್ಬಿ ತಾಲೂಕುಗಳಿದ್ದು, ಈಗ ಹೊಸದಾಗಿ ಶಿರಾ ತಾಲೂಕನ್ನೂ ಸೇರಿಸಲಾಗಿದೆ. ಮಧುಗಿರಿ-ಕೊರಟಗೆರೆ-ಪಾವಗಡ ತಾಲೂಕುಗಳು ಬರಪೀಡಿತ ಪ್ರದೇಶಗಳಾಗಿದ್ದು, ಆದಾಯ ಅಷ್ಟಕ್ಕಷ್ಟೇ. ಈ 3 ತಾಲೂಕುಗಳ ಆದಾಯ ಶೇ.50 ರಷ್ಟಾದರೆ ಶಿರಾ ತಾಲೂಕಿನ ಆದಾಯವೇ ಶೇ.50 ಇದೆ. ಶಿರಾ ತಾಲೂಕು ಸಾರಿಗೆ ಆದಾಯದಲ್ಲಿ ಚಿನ್ನದ ಮೊಟ್ಟೆಯಿಡುವ ಕೋಳಿ. ಹಾಗಾಗಿ ಸರ್ಕಾರಗಳು ಬದಲಾದಂತೆಲ್ಲಾ ಶಿರಾ ತಾಲೂಕನ್ನು ಮಧುಗಿರಿ ವ್ಯಾಪ್ತಿಯಿಂದ ಬದಲಾಯಿಸಲಾಗುತ್ತದೆ. ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಸರ್ಕಾರ ಮಧುಗಿರಿ ಎಆರ್‌ಟಿಒ ವ್ಯಾಪ್ತಿಗೆ ವಾರ್ಷಿಕ 1.73 ಕೋಟಿ ರೂಪಾಯಿ ಆದಾಯ ನಿಗದಿಪಡಿಸಿದೆ. ಈ ಸಂಪತ್ತಿಗೆ ನೂತನ ಕಚೇರಿಗಳನ್ನು ಏಕೆ ತೆರೆಯಬೇಕು ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಗಳು ತಿಳಿಸಿದ್ದಾರೆ.
ಶಿರಾ ಜನತೆಗೆ ಹೊರೆ: ಮಧುಗಿರಿಯಿಂದ ಶಿರಾ 32 ಕಿ.ಮೀ., ದೂರದಲ್ಲಿದೆ. ಅದೇ ತುಮಕೂರು 45 ಕಿಮೀ ದೂರದಲ್ಲಿದೆ. ಶಿರಾ ತಾಲೂಕಿನ ಜನತೆಗೆ ವಾಹನ ನೋಂದಣಿ, ಪರವಾನಗಿ ಕೆಲಸಗಳಿಗಾಗಿ ತುಮಕೂರಿಗೆ ವಾಹನಗಳನ್ನು ಕೊಂಡೊಯ್ದಲ್ಲಿ ಟೋಲ್ ಬರೆಯ ಹೊರೆಯು ಸಹ ಬೀಳಲಿದೆ.
ಜನರು ಖುಷ್: ಶಿರಾ ತಾಲೂಕನ್ನು ತುಮಕೂರು ಆರ್‌ಟಿಒ ವ್ಯಾಪ್ತಿಗೆ ಮರು ನಿಗದಿಪಡಿಸುವಂತೆ ಕೋರಿ ಸಲ್ಲಿಸಾಲದ ಮನವಿಗೆ ಸರ್ಕಾರ ಸ್ಪಂದಿಸಿದೆ. ಇದಕ್ಕೆ ಶ್ರಮಿಸಿದ ಎಂಎಲ್ಸಿ ಚಿದಾನಂದ್ ಎಂ ಗೌಡ, ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ತೆಂಗು ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್ ಅವರನ್ನು ತಾಲೂಕಿನ ಜನತೆ ಅಭಿನಂದಿಸಿದ್ದಾರೆ.
ತುಮಕೂರು ಆಯ್ಕೆ ಏಕೆ : ಮಧುಗಿರಿ ಎಆರ್‌ಟಿಒ ಕಚೇರಿಯಲ್ಲಿ ಆರಂಭದಲ್ಲಿ ಕಾಯಂ ಸಿಬ್ಬಂದಿಯಿದ್ದರು. ಆದರೆ ನಂತರದ ದಿನಗಳಲ್ಲಿ ಕಾಯಂ ಸಿಬ್ಬಂದಿಯ್ಲಿ. ಮೂರು ತಿಂಗಳಿಗೊಮ್ಮೆ ಸಿಬ್ಬಂದಿ ಬದಲಾಗುತ್ತಾರೆ. ಅ್ಲದೇ ಸಿಬ್ಬಂದಿ ಕೊರತೆ ಬಹಳಷ್ಟಿದೆ. ಇದರಿಂದ ಕಚೇರಿ ಕೆಲಸ ಕಾರ್ಯಗಳಿಗೆ ನಿರಂತರವಾಗಿ ಅಲೆಯುವ ವಾತಾವರಣವಿದೆ. ಅಲ್ಲದೇ ಎಫ್‌ಸಿ ಮಾಡಿಸಲು ಮಧುಗಿರಿಗೆ ಒಂದು ದಿನ ಅಲೆಯಬೇಕು. ವಾಹನಕ್ಕೆ ಮೀಟರ್ ಸೀಲ್ ಹಾಕಿಸಿಕೊಳ್ಳಲು, ವಾಹನ ಸಾಲ ಕಟ್ಟಲು ತುಮಕೂರಿಗೆ ಮತ್ತೊಂದು ದಿನ ಅಲೆಯಬೇಕು. ಇದರಿಂದ ಬಹಳಷ್ಟು ಚಾಲಕರಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ತುಮಕೂರಿಗೆ ಹೋದರೆ ವಾಹನದ ಬಿಡಿ ಭಾಗಗಳನ್ನೂ ಖರೀದಿಸಬಹುದು. ಮಧುಗಿರಿ ಎಆರ್‌ಟಿಒ ವಿಭಾಗಕ್ಕೆ ಶಿರಾ ತಾಲೂಕನ್ನು ಸೇರಿಸಿದ ಸರ್ಕಾರ ಸಮರ್ಪಕ ಸೌಕರ್ಯ ನೀಡಿಲ್ಲ. ಹಾಗಾಗಿ ನಮಗೆ ತುಮಕೂರು ಸಾರಿಗೆ ಕಚೇರಿಯೇ ಬೇಕು ಎನ್ನುತ್ತಾರೆ ಶಿರಾ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಸಿದ್ದೇಶ್.
ಮಧುಗಿರಿ ಎಆರ್‌ಟಿಒ ವ್ಯಾಪ್ತಿಗೆ ಸೇರಿದ್ದ ಶಿರಾ ತಾಲೂಕನ್ನು ತುಮಕೂರು ವ್ಯಾಪ್ತಿಗೆ ಸೇರಿಸಿದ್ದು ಖಂಡನೀಯ. ಇಲ್ಲಿ ರಾಜಕೀಯ ಬೆಳವಣಿಗೆಗಳು ಕೆಲಸ ಮಾಡಿದ್ದು, ಇಚ್ಚಾಶಕ್ತಿ ಕೊರತೆ ಕಾಡುತ್ತಿದೆ. ಶಿರಾ ತಾಲೂಕನ್ನು ಮತ್ತೆ ಮಧುಗಿರಿ ವ್ಯಾಪ್ತಿಗೆ ಸೇರಿಸಲು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಂದ ಮಾತ್ರ ಸಾಧ್ಯ. ಮುಂದಿನ ದಿನಗಳಲ್ಲಿ ಅವರು ಶಾಸಕರಾಗಿ ಆಯ್ಕೆಯಾದಲ್ಲಿ ಶಿರಾ ತಾಲೂಕು ಮಧುಗಿರಿ ಎಆರ್‌ಟಿಒ ವ್ಯಾಪ್ತಿಗೆ ಮತ್ತೆ ಸೇರುವುದು ಖಚಿತ. ಲಾಲಾಪೇಟೆ ಮಂಜುನಾಥ್, ಪುರಸಭೆ ಸದಸ್ಯ