

ಉಡುಪಿ: ಮಾರುಕಟ್ಟೆಯಲ್ಲಿನ ಸಿಂಥೆಟಿಕ್ ವರ್ಣಗಳ ಬಳಕೆಯಿಂದಾಗಿ ಜನಪದ ಕಲೆಗಳು ಪಾರಂಪರಿಕ ಸೊಗಡನ್ನು ಕಳೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರಗಳು ನಿಜಬಣ್ಣವನ್ನು ತೋರ್ಪಡಿಸಲು ಅತೀ ಅಗತ್ಯ ಎಂದು ಬಹುಶ್ರುತ ವಿದ್ವಾಂಸ ನಾಡೋಜ ಕೆ.ಪಿ. ರಾವ್ ಹೇಳಿದರು.
ಗುರುವಾರ ವೆಂಟನಾ ಪೌಂಡೇಶನ್‌ನ ಸಹಯೋಗದಲ್ಲಿ ಭಾವನಾ ಪೌಂಡೇಶನ್ ಹಾವಂಜೆ, ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸಿದ್ದ ಜನಪದ ಸರಣಿ ಕಲಾ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವೆಂಟನಾ ಪೌಂಡೇಶನ್‌ನ ಟ್ರಸ್ಟಿ ಶಿಲ್ಪಾ ಭಟ್ ಉದ್ಘಾಟಿಸಿದರು. ಉದ್ಯಮಿ ಸುಗುಣ ಶಂಕರ್ ಸುವರ್ಣ, ಭಾವನಾ ಪ್ರತಿಷ್ಠಾನದ ನಿರ್ದೇಶಕ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ನಿರೂಪಿಸಿದರು.
ಕಾರ್ಯಾಗಾರದಲ್ಲಿ ಬಿಹಾರದ ಕರಕುಶಲ ಕಲೆಯನ್ನು ಈ ಬಾರಿ ಪರಿಚಯಿಸುತ್ತಿದ್ದು, ಮಿಥಿಲಾ ಲೋಕಚಿತ್ರವಾದ ಮಧುಬನಿ, ಗೋಧ್ನಾ ಹಾಗೂ ಪೇಪರ್ ಮೆಶ್ ಕಲಾಕೃತಿಗಳನ್ನು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರವಣ್ ಪಾಸ್ವಾನ್, ಉಜಾಲಾ ಕುಮಾರಿ, ಸಂತೋಷ್ ಪಾಸ್ವಾನ್ ಏ.27ರಿಂದ 30ನೇ ಏಪ್ರಿಲ್ ತನಕ ಕಲಿಸಿಕೊಡುತ್ತಿದ್ದಾರೆ. ನೈಸರ್ಗಿಕ ವರ್ಣಗಳ ರಚನಾ ಕ್ರಮ, ಬಳಕೆ ಹಾಗೂ ಮಧುಬನಿ ಶೈಲಿಯ ಗುಣಗಳನ್ನು ತಿಳಿಸಲಿದ್ದಾರೆ.