ಮಧು, ಗೀತಾ, ಶಿವಣ್ಣ ವಿರುದ್ಧ ಕುಮಾರ್ ಬಂಗಾರಪ್ಪ ಟಾಂಗ್

kumar bangarappa post
ಗೀತಾ ಶಿವರಾಜ್‌ಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿರುವ ಮಾಜಿ ಸಚಿವ, ಸಹೋದರ ಕುಮಾರ್ ಬಂಗಾರಪ್ಪ.
Published on

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಮತ್ತು ನಟ ಶಿವರಾಜ್‌ಕುಮಾರ್ ವಿರುದ್ಧ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಸಾಮಾಜಿಕ ಜಾಲತಾಣದ ಮೂಲಕ ಕಿಡಿಕಾರಿದ್ದಾರೆ.

ಮಾಜಿ ಸಿಎಂ ಎಸ್.ಬಂಗಾರಪ್ಪ ಅವರನ್ನು ನನ್ನ ತಮ್ಮ(ಮಧು) ಹಾಗೂ ತಂಗಿ(ಗೀತಾ) ತಮ್ಮ ಸ್ವಾರ್ಥ ಸಾಧನೆಗೆ ಕೇವಲ ಒಂದು ಲೋಕಸಭಾ ಕ್ಷೇತ್ರಕ್ಕೆ ಸೀಮಿತಗೊಳಿಸಿದರು. ಬಂಗಾರಪ್ಪ ಅವರನ್ನು ಕೇವಲ ಪ್ರಚಾರ ಸಾಮಗ್ರಿಯನ್ನಾಗಿ ಬಳಸಿಕೊಂಡವರಿಗೆ ತಕ್ಕ ಶಾಸ್ತಿಯಾಯಿತು. ಈ ಮಹಾಪರಾಧಕ್ಕಾಗಿ ಜಿಲ್ಲೆಯ, ಕ್ಷೇತ್ರದ ಜನರ ಕ್ಷಮಾಪಣೆ ಕೇಳಿ ಹೋಗಿಬರಲಿ, ಟಾಟಾ! ಎಂದು ಟಾಂಗ್ ನೀಡಿದ್ದಾರೆ.
ಕನ್ನಡದ ಕಣ್ಮಣಿ ಡಾ. ರಾಜಕುಮಾರ್ ಹೆಸರನ್ನು ದುರುಪಯೋಗಪಡಿಸಿಕೊಂಡು ಅವರಿಗಿಲ್ಲದಿದ್ದ ಇಂಗಿತವನ್ನು ಇತ್ತೆಂದು ಪ್ರಚುರಪಡಿಸಿ ಲಾಭ ಮಾಡಿಕೊಳ್ಳಬಯಸಿದವರಿಗೆ ಮಾಡಿದ್ದುಣ್ಣೋ ಮಹಾರಾಯ ಎಂಬಂಥ ಸ್ಥಿತಿಯಾಗಿದೆ ಎಂದು ಕಿಡಿಕಾರಿದ್ದಾರೆ. ಉತ್ತಮ ಉದ್ದೇಶ ಇವರದ್ದಾಗಿದ್ದರೆ ಖಂಡಿತ ವಿಜಯಲಕ್ಷ್ಮೀ ಒಲಿಯುತ್ತಿದ್ದಳು. ಸ್ವಂತ ಸಹೋದರನ ಭವಿಷ್ಯಕ್ಕೆ ತೊಡರುಗಾಲು ಹಾಕಲೆಂದೇ ಬೆಂಗಳೂರಿನಿಂದ ಧಾವಿಸಿಬಂದು ತಿಳಿಯಾಗಿಸಬೇಕಿದ್ದ ವಾತಾವರಣವನ್ನು ಕಲುಷಿತಗೊಳಿಸಿ ದಿಕ್ಕು ದೆಸೆ ಇಲ್ಲದಂತಾಗಿ ಹೋಗಿ ಗೂಡು ಸೇರಿಕೊಂಡಿದ್ದಾರೆ. ಮಧು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಇಲ್ಲವೇ ಸಿಎಂ ಸಿದ್ದರಾಮಯ್ಯ ಸಂಪುಟದಿಂದ ವಜಾ ಮಾಡಬೇಕು ಎಂದು ಬರೆದುಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net