ಮಧು ಬಂಗಾರಪ್ಪ ಸುಸಂಸ್ಕೃತ ಪದ ಬಳಲಿ: ಬಿವೈಆರ್

B y Raghavendra
ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ
Published on

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಚುನಾವಣಾ ಪ್ರಚಾರದಲ್ಲಿ ಅತ್ಯಂತ ಕೀಳು ಮಟ್ಟದ, ಅಸಭ್ಯ ಪದಗಳನ್ನು ಬಳಕೆ ಮಾಡುತ್ತಿದ್ದಾರೆ. ಶಿಕ್ಷಣ ಸಚಿವರಾದ ಅವರು ಸುಸಂಸ್ಕೃತ ಹಾಗೂ ಸಭ್ಯ ಪದ ಉಪಯೋಗಿಸಲಿ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿರುಗೇಟು ನೀಡಿದ್ದಾರೆ.

ಈ ಚುನಾವಣೆಯಲ್ಲಿ ಅಭಿವೃದ್ಧಿ, ರಾಷ್ಟ್ರೀಯತೆ ಬಗ್ಗೆ ಚರ್ಚೆ ನಡೆಯುತ್ತದೆ ಎಂದು ಭಾವಿಸಿದ್ದೆ. ಆದರೆ ನಮ್ಮ ಕುಟುಂಬವನ್ನು ಟೀಕಿಸುವುದೇ ಪ್ರಚಾರ ಎಂದು ಮಧು ಬಂಗಾರಪ್ಪ ಭಾವಿಸಿದಂತಿದೆ. ಅವರು ಬಳಕೆ ಮಾಡುವ ಪದಗಳನ್ನು ಬಿಜೆಪಿ ನಮಗೆ ಕಲಿಸಿಲ್ಲ ಎಂದು ಹರಿಹಾಯ್ದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲವೂ ಬಂಗಾರಪ್ಪ ಅವರೇ ಮಾಡಿದ್ದು. ಬಿಜೆಪಿ ಏನೂ ಮಾಡಿಲ್ಲ. ಸಂಸದರಾಗಿ ರಾಘವೇಂದ್ರ ಯಾವುದೇ ಅಭಿವೃದ್ಧಿ ಮಾಡಿಲ್ಲ ಎನ್ನುವ ಮಧು ಬಂಗಾರಪ್ಪ ಈಗಲೇ ಹತಾಶರಾದಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದರು.
ದೇಶಭಕ್ತರ ಬಗ್ಗೆ ಹಗುರವಾಗಿ ಮಾತನಾಡುವ ಮಧು ಬಂಗಾರಪ್ಪ ಬಿಜೆಪಿ ಕಾರ್ಯಕರ್ತರನ್ನು ಚೇಲಾಗಳು ಎಂದು ಹೀಯಾಳಿಸಿದ್ದಾರೆ. ಬಂಗಾರಪ್ಪ ಹಾಗೂ ಮಧು ನಮ್ಮ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಅವರ ಪರವಾಗಿ ಕೆಲಸ ಮಾಡಿದ್ದು ನಮ್ಮ ಕಾರ್ಯಕರ್ತರು ಇದನ್ನು ಮಧು ಮರೆಯಬಾರದು ಎಂದು ಹೇಳಿದರು.
ಎಲ್ಲ ಸಂಗತಿಗಳ ಬಗ್ಗೆ ಹಗುರವಾಗಿ ದರ್ಪದಿಂದ ಮಧು ಮಾತನಾಡುತ್ತಿದ್ದಾರೆ. ಅಂದು ಜೆಡಿಎಸ್‌ನಲ್ಲಿದ್ದಾಗ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಬಗ್ಗೆ ಇನ್ನಿಲ್ಲದ ಭಯ, ಭಕ್ತಿ ಪ್ರದರ್ಶಿಸುತ್ತಿದ್ದ ಅವರು ಈಗ ದೊಡ್ಡಗೌಡರ ಬಗ್ಗೆ ಸಣ್ಣತನದ ಮಾತುಗಳನ್ನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ, ಜಿಲ್ಲಾ ವಕ್ತಾರ ಎಸ್.ಎಸ್.ಜ್ಯೋತಿಪ್ರಕಾಶ್, ಪ್ರಧಾನ ಕಾರ್ಯದರ್ಶಿ ಶಿವರಾಜ್, ಕಾರ್ಯದರ್ಶಿ ಜಗದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net