

ಮಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಿಗೆ 13000 ಶಿಕ್ಷಕರು ಹಾಗೂ ಅನುದಾನಿತ ಶಾಲೆಗಳಿಗೆ 5500 ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಿದ್ಧತೆ ನಡೆದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹಿಂದಿನ ಸರ್ಕಾರದ ಅವಧಿಯಲ್ಲಿ ಕೇವಲ 4700 ಶಿಕ್ಷಕರ ನೇಮಕ ಮಾಡಲಾಗಿತ್ತು. ನಾನು ಶಿಕ್ಷಣ ಸಚಿವನಾದ ಬಳಿಕ 13000 ಸಾವಿರ ಶಿಕ್ಷಕರ ನೇಮಕಾತಿ ನಡೆದಿದೆ.ಈಗ 18500 ಶಿಕ್ಷಕರ ನೇಮಕಾತಿಗೆ ಸಿದ್ಧತೆ ನಡೆದಿದೆ ಎಂದರು.
ಎಲ್‌ಕೆಜಿಯಿಂದ 12ನೆ ತರಗತಿವರೆಗೆ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್)ಮಾದರಿಯಡಿ ಶೇ. 80ರಷ್ಟು ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಈ ಶಾಲೆಗಳಲ್ಲಿ ಫಲಿತಾಂಶದ ಗುಣಮಟ್ಟ ಹೆಚ್ಚಿಸುವ ಸಲುವಾಗಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಿ ಪರೀಕ್ಷೆಯಲ್ಲಿ ನಕಲು ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ. ಇದೇ ವೇಳೆ 3 ಸ್ತರದ ಪರೀಕ್ಷಾ ಪದ್ಧತಿಯೂ ಕೂಡಾ ಮಕ್ಕಳ ಫಲಿತಾಂಶವನ್ನು ಉತ್ತಮ ಪಡಿಸಲು ಸಹಕಾರಿಯಾಗಿದೆ. ಈ ಪರೀಕ್ಷಾ ವ್ಯವಸ್ಥೆಯಿಂದ ಎಸ್‌ಎಸ್‌ಎಲ್‌ಸಿಯಲ್ಲಿ 1,16, 000 ಮಕ್ಕಳು ಉತ್ತೀಣರಾಗಿದ್ದು,
ಪಿಯುಸಿಯಲ್ಲಿಯೂ 56000 ಕ್ಕೂ ಅಧಿಕ ಮಕ್ಕಳು ಉತ್ತೀಣರಾಗಿದ್ದಾರೆ. ಈ ಪರೀಕ್ಷಾ ವ್ಯವಸ್ಥೆಯನ್ನು ಉಚಿತವಾಗಿ ಮಾಡುವ ಮೂಲಕ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಅವಕಾಶ ಕಲ್ಪಿಸಿ ಅವರ ಭವಿಷ್ಯ ರೂಪಿಸಲು ಅನುವು ಮಾಡಿಕೊಡಲಾಗಿದೆ ಎಂದು ಅವರು ಹೇಳಿದರು.
ದ.ಕ. ಮತ್ತು ಉಡುಪಿಯಲ್ಲಿ ತಾಂತ್ರಿಕ ಕಾರಣದಿಂದ ಜಾತಿ ಸಮೀಕ್ಷೆ ವಿಳಂಬವಾಗಿದೆ. ಅ.8ರಿಂದ ಶಾಲೆಗಳು
ಪುನರಾರಂಭಗೊಳ್ಳಲಿವೆ. ಇದುವರೆಗೆ ಎಷ್ಟು ಪ್ರಮಾಣದ ಸಮೀಕ್ಷೆ ಆಗಿದೆ ಎಂಬ ನೆಲೆಯಲ್ಲಿ ಆಯೋಗದ ನಿರ್ದೇಶನದ ಮೇರೆಗೆ, ಮುಂದೆ ಸಮೀಕ್ಷೆಗೆ ಶಿಕ್ಷಕರನ್ನು ಮಕ್ಕಳ ಪಾಠ- ಚಟುವಟಿಕೆಗಳಿಗೆ ತೊಂದರೆ ಆಗದಂತೆ ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬ ಬಗ್ಗೆ ಇಲಾಖೆ ನಿರ್ಧರಿಸಲಿದೆ. ಶೇ. 95ರಷ್ಟು ಶಿಕ್ಷಕರು ರಾಜ್ಯದಲ್ಲಿ ಸಮೀಕ್ಷೆಯಲ್ಲಿ ಮುಂಚೂಣಿಯಲ್ಲಿದ್ದು ಸಹಕರಿಸಿದ್ದಾರೆ ಎಂದು ಸಚಿವರು ತಿಳಿಸಇಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಮುಖಂಡರಾದ ಪದ್ಮರಾಜ್ ಆರ್.,
ಶುಭೋದಯ ಆಳ್ವ, ಪದ್ಮನಾಭ ಕೋಟ್ಯಾನ್, ಟಿ.ಕೆ. ಸುಧೀರ್, ನೀರಜ್‌ಪಾಲ್ ಉಪಸ್ಥಿತರಿದ್ದರು.