ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ವಿಶೇಷ ಕಾಳಜಿ ವಹಿಸಲಾಗುತ್ತಿದೆ: ಮಧು ಬಂಗಾರಪ್ಪ

Madhu Bangarappa
Published on

ಶಿವಮೊಗ್ಗ: ಮಕ್ಕಳ ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಅನ್ವಯಗೊಳ್ಳುವಂತೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಸ್​ಎಸ್​ಎಲ್​​ಸಿ, ಉನ್ನತ ಶಿಕ್ಷಣ ಹಾಗೂ ಪ್ರವೇಶ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿಶೇಷ ಕಲಿಕಾ ತರಗತಿಗಳನ್ನು ಸರ್ಕಾರದ ವತಿಯಿಂದಲೇ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ತಿಳಿಸಿದ್ದಾರೆ.

ತೀರ್ಥಹಳ್ಳಿಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ವತಿಯಿಂದ ಏರ್ಪಡಿಸಲಾಗಿದ್ದ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ (ಕ್ರಾಶ್ ಕೋರ್ಸ್) ವಿಶೇಷ ತರಗತಿಗಳಿಂದಾಗಿ ಜನಸಾಮಾನ್ಯ ಕುಟುಂಬದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಲಿದೆ ಅಲ್ಲದೆ ಅವರ ಕುಟುಂಬದ ಮುಖ್ಯಸ್ಥರಿಗೆ ಆರ್ಥಿಕವಾಗಿ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆದವರ ಫಲಾನುಭವಿಗಳ ಸಮಾವೇಶ ಮಾತ್ರವಲ್ಲ, ಇದು ಸೌಲಭ್ಯ ವಂಚಿತರಿಗೆ ಒದಗಿಸುವಲ್ಲಿಯೂ ಈ ವೇದಿಕೆ ನಿರ್ಮಾಣಗೊಂಡಿದ್ದು, ಸೌಲಭ್ಯ ವಂಚಿತ ಫಲಾನುಭವಿಗಳು ಸಂಬಂಧಿಸಿದ ಇಲಾಖಾ ಅಧಿಕಾರಿಗಳನ್ನು ಇಲ್ಲಿಯೇ ಸಂಪರ್ಕಿಸಿ, ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಸಮಸ್ಯೆಗಳು ಎದುರಾದಲ್ಲಿ ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ. ಈಗಾಗಲೇ ಸೌಲಭ್ಯ ಪಡೆದ ಫಲಾನುಭವಿಗಳು ಪಕ್ಷಾತೀತವಾಗಿ ಅರ್ಹರನ್ನು ಗುರುತಿಸಿ ಸೌಲಭ್ಯ ದೊರೆಕಿಸಿಕೊಡಲು ಮುಂದಾಗಬೇಕೆಂದು ವಿನಂತಿಸಿದ್ದಾರೆ.

ಸರ್ಕಾರವು ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ನಿಗಧಿಪಡಿಸಿದ ಕಾಲಮಿತಿಯೊಳಗಾಗಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿ, ನುಡಿದಂತೆ ನಡೆದು, ಮುಂದೆ ಸಾಗುತ್ತಿದೆ. ಮುಂದೆಯೂ ಈ ಯೋಜನೆಗಳು ಜಾರಿಯಲ್ಲಿರಲಿವೆ. ಪ್ರಸಕ್ತ ಸರ್ಕಾರವು ಪ್ರತಿ ಮನೆಯ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿದ್ದು, ಜನರ ನೋವು-ನಲಿವುಗಳಿಗೆ ದ್ವನಿಯಾಗಲಿದೆ. ಅಲ್ಲದೇ ನೆರವಿಗೆ ಧಾವಿಸಲಿದೆ.

Madhu Bangarappa

ಮಾಜಿ ಮುಖ್ಯಮಂತ್ರಿಗಳಾಗಿದ್ದ ಎಸ್.ಬಂಗಾರಪ್ಪ ಅವರ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ್ದ ರೈತರ ಹೊಲಗಳಿಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆ ದಶಕಗಳ ನಂತರವೂ ಜಾರಿಯಲ್ಲಿರುವುದು ಹರ್ಷದ ಸಂಗತಿಯಾಗಿದೆ. ಅವರ ಮಾರ್ಗದರ್ಶನದಲ್ಲಿಯೇ ನಾವೂ ಕೂಡ ಆಡಳಿತ ನಡೆಸಲು ಮುಂದಾಗಿದ್ದೇವೆ. ವಿಶೇಷವಾಗಿ ಅಂದಿನ ಪ್ರಣಾಳಿಕೆ ಸಮಿತಿಯ ಸದಸ್ಯನಾಗಿದ್ದೆ. ಪ್ರಣಾಳಿಕೆ ಇಂದು ಅನುಷ್ಠಾನಗೊಂಡಿದೆ ಎಂಬ ಹೆಮ್ಮೆ ನನಗಿದೆ.

ರಾಜ್ಯದ ಪ್ರತಿ ಮನೆಮನೆಗಳಿಗೆ ಉಚಿತ ಬೆಳಕು ನೀಡಿದ ಕೀರ್ತಿ ನಮ್ಮದು. ಯುವನಿಧಿ ಯೋಜನೆಯಡಿ ಯುವಕರು ತಮ್ಮ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳುವಲ್ಲಿ ಸರ್ಕಾರ ನೀಡುವ ಸಹಾಯಧನ ಉಪಯುಕ್ತವಾಗಿರುವುದು ನಿರುದ್ಯೋಗಿಗಳಾಗಿ ವಿದ್ಯಾವಂತರ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸಿರುವುದನ್ನು ಕಾಣಬಹುದಾಗಿದೆ. ಈ ಎಲ್ಲಾ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ಹೃದಯ ತುಂಬಿ ಬರುತ್ತದೆ. ಹೆಮ್ಮೆ ಎನಿಸುತ್ತದೆ. ವಹಿಸಿಕೊಂಡ ಖಾತೆ ಸವಾಲಿನದ್ದಾಗಿದ್ದರೂ ಅದನ್ನು ಜಾಗ್ರತೆಯಾಗಿ ನಿರ್ವಹಿಸುವ ಭರವಸೆಯಿಂದ ಹಿರಿಯರು ವಹಿಸಿದ ಅಧಿಕಾರವನ್ನು ಸದುಪಯೋಗಪಡಿಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.

ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಮಕ್ಕಳಿಗೆ ಸಮವಸ್ತ್ರ, ಶೂ, ಪಠ್ಯಪುಸ್ತಕ, ಮೊಟ್ಟೆ, ಬಾಳೆಹಣ್ಣು, ಚುಕ್ಕಿ, ಹಾಲು ಜೊತೆಗೆ ಪೌಷ್ಠಿಕ ಆಹಾರ ರಾಗಿ ಮಾಲ್ಟ್‍ನ್ನು ನೀಡಲು ಕ್ರಮವಹಿಸಲಾಗುತ್ತಿದೆ ಎಂದ ಅವರು, ಎಸ್​ಎಸ್​ಎಲ್​​ಸಿ ಮತ್ತು ಪಿಯುಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣ ಪಡೆದು ಮುಂದುವರೆಯಲು ಅನುಕೂಲವಾಗುವಂತೆ ಮೂರು ಬಾರಿ ಪೂರಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರಿಂದಾಗಿ ಪ್ರಸಕ್ತ ಸಾಲಿನಲ್ಲಿ ಶಾಲೆಯಿಂದ ಹೊರಗುಳಿಯುತ್ತಿದ್ದ ಸುಮಾರು 40 ಸಾವಿರ ಮಕ್ಕಳು ಶಿಕ್ಷಣದ ಮುಖ್ಯವಾಹಿನಿಯಲ್ಲಿ ಮುಂದುವರೆಯುತ್ತಿದ್ದಾರೆ.

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಮತ್ತು ನೀರನ್ನು ಒದಗಿಸಲು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಈ ಅವಧಿಯಲ್ಲಿ ಅಲ್ಲಿನ ಶಿಕ್ಷಕರು ಮಕ್ಕಳಿಗೆ ವಿಶೇಷ ಕಲಿಕಾ ತರಗತಿಗಳನ್ನು ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ನೇಮಕವಾಗಿರುವ ಶಿಕ್ಷಕರೆಲ್ಲರೂ ಪ್ರತಿಭಾವಂತರೇ ಇರುವುದು ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net