

ವಿಜಯವಾಣಿ ಸುದ್ದಿಜಾಲ ಉಡುಪಿ
ತುಳುನಾಡಿನ ಆಚಾರ, ವಿಚಾರ, ಪದ್ಧತಿ, ಸಂಸ್ಕೃತಿ ಎಲ್ಲವೂ ವಿಭಿನ್ನ. ನಾವೆಲ್ಲ ಪ್ರಕೃತಿಯ ಆರಾಧಕರಾಗಿದ್ದು ಇಲ್ಲಿನ ಪ್ರತಿ ಮರ, ಗಿಡ, ಬಳ್ಳಿಯಲ್ಲೂ ಸಹ ಔಷಧೀಯ ಸತ್ವವಿದೆ. ಕೈಗೆ ಹಾಕಿಕೊಳ್ಳುವ ಮದರಂಗಿಯಲ್ಲೂ ಸಹ ಆರೋಗ್ಯದ ಗುಟ್ಟು ಅಡಗಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಹೇಳಿದರು.
ಉಡುಪಿಯ ಜಗನ್ನಾಥ ಸಭಾಭವನದಲ್ಲಿ ತುಳುಕೂಟ ಉಡುಪಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಮದರೆಂಗಿದ ರಂಗ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ನಮ್ಮ ಪ್ರತಿಯೊಂದು ಆಚರಣೆಯನ್ನೂ ಸಹ ಆರೋಗ್ಯದ ದೃಷ್ಟಿಯಿಂದ ನೋಡುವ ಅಗತ್ಯತೆಯಿದೆ. ಪ್ರಕೃತಿಯಲ್ಲಿ ಸಿಗುವ ಮೆಹೆಂದಿ ಸೊಪ್ಪನ್ನು ಬಳಸಿ, ಅದನ್ನು ನುಣ್ಣಗೆ ಅರೆದು ಕೈಗಳಿಗೆ ಹಾಗೂ ಕಾಲುಗಳಿಗೆ ಯುವತಿ-ಮಹಿಳೆಯರು ಹಚ್ಚಿಕೊಳ್ಳುತ್ತಾರೆ. ಇದು ಸೌಂದರ್ಯ ವೃದ್ಧಿಸುವ ಅಲಂಕಾರಕ್ಕೆ ಸಂಬಂಧ ಪಟ್ಟಿದ್ದೂ ಆಗಿದೆ. ಅವುಗಳ ಮಹತ್ವ ತಿಳಿಸಲೆಂದೇ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.
ಮಲ್ಪೆ ಪರ್ಸಿಯನ್ ಬೋಟ್ ಮೀನುಗಾರರ ಸಂದ ಅಧ್ಯ ನಾಗರಾಜ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ಉಡುಪಿ ತಾಪಂನ ಸಹಾಯಕ ನಿರ್ದೇಶಕಿ ಫರ್ಜಾನಾ ಎಂ., ಉದ್ಯಮಿ ರಮಿತಾ ಶೈಲೇಂದ್ರ ಕಾರ್ಕಳ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಚಾಲಕಿ ಯಶೋದಾ ಕೇಶವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು. ಪ್ರಕಾಶ್ ಸುವರ್ಣ ಕಟಪಾಡಿ ಹಾಗೂ ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ತುಳುನಾಡಿನ ವಿವಿಧ ಕ್ರೀಡೆಗಳು, ಜನಪದ ಕಲೆಗಳ ಸ್ಪರ್ಧೆ ನಡೆಯಿತು.
ತುಳುನಾಡಿನ ಆಚಾರ, ವಿಚಾರ, ಕಲೆ, ಸಂಸ್ಕೃತಿಯ ಬಗ್ಗೆ ಇಂದಿನ ಮಕ್ಕಳಿಗೆ ತಿಳಿ ಹೇಳುವ ಅಗತ್ಯತೆ ಇದೆ. ಇಂತಹ ಕಾರ್ಯಕ್ರಮಗಳ ಮೂಲಕ ಅವರಿಗೆ ತುಳುಭಾಷೆಯ ಮಹತ್ವ ತಿಳಿಸಬೇಕಿದೆ. ಆಗಲೇ ತುಳು ಸಂಸ್ಕೃತಿಯ ಉಳಿವು ಸಾಧ್ಯ. ಪೂರ್ಣಿಮಾ.ಸಹಾಯಕ ನಿರ್ದೇಶಕಿ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ