

ಶಿಕಾರಿಪುರ: ಕಲಿಯುಗದ ಕಾಮಧೇನು, ಭಕ್ತರ ಪಾಲಿನ ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಪುಣ್ಯಾರಾಧನೆಯ ನಿಮಿತ್ತ ಶುಕ್ರವಾರ ಶಿಕಾರಿಪುರದ ರಾಯರ ಮಠದಲ್ಲಿ ಗುರುಗಳ ಮೃತ್ತಿಕಾ ವೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ರಾಯರ ಪಲ್ಲಕ್ಕಿ ಉತ್ಸವ ಜರುಗಿತು. ಶನಿವಾರ ರಾಯರ ರಥೋತ್ಸವವು ಪಟ್ಟಣದ ರಾಜಬೀದಿಯಲ್ಲಿ ಜರುಗಲಿದೆ.
ಮಧ್ಯಾರಾಧನೆಯ ನಿಮಿತ್ತ ಶುಕ್ರವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ವೃಂದಾವನದ ದರ್ಶನ ಪಡೆದರು. ಅರ್ಚಕ ನರಸಿಂಹ ಆಚಾರ್, ವಾದಿರಾಜ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ಶಾಸಕ ಬಿ.ವೈ.ವಿಜಯೇಂದ್ರ ಮಠಕ್ಕೆ ಆಗಮಿಸಿ ರಾಯರ ದರ್ಶನಾಶೀರ್ವಾದ, ಫಲ ಮಂತ್ರಾಕ್ಷತೆ ಪಡೆದರು.
ನಾಗರಾಜ್, ಪ್ರಕಾಶ್, ಗಿರೀಶ್ ಭಟ್, ಹರೀಶ್ ಕೊಟ್ಟ, ನರಸಿಂಹ ಜೋಯ್ಸ್, ಸಂಜು ಇತರರಿದ್ದರು.
ಗಮನ ಸೆಳೆದ ರಾಯರ ರಂಗೋಲಿ: ರಾಯರ ವೃಂದಾವನದ ಮುಂಭಾಗ ನಿತಿನ್ ಸಾನು, ಚಂದನಾ ರಂಗೋಲಿಯಲ್ಲಿ ಬಿಡಿಸಿದ ರಾಯರು ಶ್ರೀ ಕೃಷ್ಣನ ಜತೆ ಇರುವ ಚಿತ್ರ ಭಕ್ತರ ಗಮನ ಸೆಳೆಯಿತು.