

ಹನೂರು: ಕರೊನಾಗೆ ಲಾಕ್‌ಡೌನ್ ಆಗಿದ್ದ ದೇಗುಲಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಜೂ.8ರಿಂದ (ಇಂದಿನಿಂದ) ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ದೇವರ ದರ್ಶನಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಲಾಕ್‌ಡೌನ್ ಹಿನ್ನೆಲೆ ಮ.ಬೆಟ್ಟದ ಮಾದಪ್ಪನ ಸನ್ನಿಧಿಗೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಭಕ್ತರು ಬೆಟ್ಟಕ್ಕೆ ಆಗಮಿಸುವುದನ್ನು ನಿಷೇಧಿಸಲಾಗಿತ್ತು. ಇದರಿಂದ ಬೆಟ್ಟ ಭಕ್ತರಿಲ್ಲದೆ ಭಣಗುಡುತ್ತಿತ್ತು. ಅಲ್ಲದೆ, ದೇವರ ದರ್ಶನ ಭಾಗ್ಯ ಸಿಗುತ್ತಿಲ್ಲವೆಂದು ಭಕ್ತರು ನಿರಾಸೆಯನ್ನು ವ್ಯಕ್ತಪಡಿಸುತ್ತಿದ್ದರು. ಆದರೆ, ಸರ್ಕಾರ ದೇಗುಲಗಳನ್ನು ತೆರೆಯಲು ಅನುಮತಿ ನೀಡಿರುವುದಿಂದ ಶ್ರೀಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಕೋವಿಡ್-19 ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿರುವ ಜತೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಈ ಹಿಂದೆ ದೇವರ ದರ್ಶನಕ್ಕೆ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನವನ್ನು ಪಡೆಯುತ್ತಿದ್ದರು. ಇದೀಗ ಇದಕ್ಕೆ ಕಡಿವಾಣ ಹಾಕಲಾಗಿದ್ದು, ಪರಸ್ಪರ ಅಂತರವನ್ನು ಕಾಯ್ದುಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ಬಾರಿಗೆ 180 ಜನರು ಮಾತ್ರ ಸಾಲಿನಲ್ಲಿ ತೆರಳಿ ದೇವರ ದರ್ಶನ ಮಾಡಬೇಕಿದೆ. ಈ ದಿಸೆಯಲ್ಲಿ ದೇಗುಲದ ಮುಂಭಾಗದಲ್ಲಿನ ಬಯಲು ರಂಗಮಂದಿರದಲ್ಲಿ ಎ, ಬಿ, ಸಿ, ಡಿ ಎಂದು 4 ಕೌಂಟರ್ ಮಾಡಲಾಗಿದ್ದು, 200 ಜನರು ಕುರ್ಚಿಯಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ದೇಗುಲದ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಹಾಗೂ ಸ್ಕ್ರೀನಿಂಗ್ ನಡೆಸಲಾಗುತ್ತದೆ. ಮಾಸ್ಕ್ ಧರಿಸದೇ ಬರುವ ಭಕ್ತರನ್ನು ದೇಗುಲಕ್ಕೆ ಪ್ರವೇಶಿಸದಂತೆ ಪ್ರಾಧಿಕಾರ ಎಚ್ಚರಿಕೆ ಕ್ರಮ ಅನುಸರಿಸಿದೆ.
ಚಿನ್ನದ ರಥೋತ್ಸವವಿಲ್ಲ: ದೇಗುಲದಲ್ಲಿ ಪ್ರತಿದಿನ ಸಂಜೆ 7ಕ್ಕೆ ದೇಗುಲದ ಆವರಣದಲ್ಲಿ ಚಿನ್ನದ ರಥೋತ್ಸವ ನಡೆಯುತ್ತಿತ್ತು. ಆದರೆ, ಕೋವಿಡ್ 19 ಹಿನ್ನೆಲೆ ಜೂ.8ರಿಂದ ತಾತ್ಕಲಿಕವಾಗಿ ಚಿನ್ನದ ರಥೋತ್ಸವವನ್ನು ರದ್ದುಪಡಿಸಲಾಗಿದೆ. ಅಲ್ಲದೆ, ಅನ್ನ ಸಂತರ್ಪಣೆ (ಪರ)ಗೆ ನಿರ್ಬಂಧ ಹೇರಲಾಗಿದೆ. ಬೆಟ್ಟಕ್ಕೆ ಬಸ್, ಕಾರು ಹಾಗೂ ಬೈಕ್‌ನಲ್ಲಿ ಬರುವವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಗೂಡ್ಸ್ ಆಟೋ ಹಾಗೂ ಟ್ರಾಕ್ಟರ್‌ನಲ್ಲಿ ಬರುವವರನ್ನು ನಿಷೇಧಿಸಲಾಗಿದೆ. ದಾಸೋಹ ಭವನದಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ತಿಂಡಿ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಆದರೆ, ಒಟ್ಟಿಗೆ ಕುಳಿತು ತಿನ್ನಲು ಅವಕಾಶ ಇರುವುದಿಲ್ಲ.
ಒಂದು ಕಡೆ ಪ್ರವೇಶ: ಈ ಹಿಂದೆ ಮ.ಬೆಟ್ಟದ ದೇಗುಲಕ್ಕೆ ರಾಜಗೋಪುರ ಹಾಗೂ ಬಯಲು ರಂಗಮಂದಿರ ಬಳಿ ಭಕ್ತರ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇದೀಗೆ ಬಯಲು ಮಂದಿರದ ಪ್ರವೇಶ ದ್ವಾರದಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ದೇವರ ದರ್ಶನ ಪಡೆದು ರಾಜಗೋಪುರ ಮುಂಭಾಗದ ದ್ವಾರದಲ್ಲಿ ತೆರಳಬೇಕಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ಮಾದಪ್ಪನ ದೇಗುಲಕ್ಕೆ ಭಕ್ತರ ಪ್ರವೇಶ ನೀಡಲಾಗುತ್ತಿದ್ದು, ಕರೊನಾ ಮುನ್ನೆಚ್ಚರಿಕೆಯ ಕ್ರಮವಾಗಿ ಪ್ರಾಧಿಕಾರ ಅಗತ್ಯ ಕ್ರಮಕೈಗೊಂಡಿದ್ದು ಆಗಮಿಸುವ ಭಕ್ತರು ಅಂತರವನ್ನು ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಭಕ್ತರ ಸಂಖ್ಯೆ ಹೆಚ್ಚಿದರೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಭಕ್ತರನ್ನು ತಾಳುಬೆಟ್ಟದಲ್ಲಿಯೇ ತಡೆದು ಬಿಡಲಾಗುತ್ತದೆ.
ಜಯ ವಿಭವಸ್ವಾಮಿ ಕಾರ್ಯದರ್ಶಿ, ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮ.ಬೆಟ್ಟ.