ಗ್ರಾಮ ಆಡಳಿತಾಧಿಕಾರಿಗಳ ವಿರುದ್ಧ ಆಕೋಶ

13M.D.R.2
ಗ್ರಾಮ ಆಡಳಿತಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡದೆ ಕರ್ತವ್ಯ ಲೋಪವೆಸಗುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮದ್ದೂರು ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಮರಳಿಗ ಶಿವರಾಜು, ಶ್ರೀನಿವಾಸ್, ಪ್ರಕಾಶ್, ಗುರುಲಿಂಗಯ್ಯ, ಶಂಕರ್, ತಿಮ್ಮೇಶ್ ಇದ್ದರು.
Published on

ಮದ್ದೂರು: ಗ್ರಾಮ ಆಡಳಿತಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಕರ್ತವ್ಯ ನಿರ್ವಹಿಸದೆ, ರೈತರಿಗೆ ತೊಂದರೆ ನೀಡಿ ಹಾಗೂ ಪರಿಶಿಷ್ಟ ಜಾತಿ ಸಮುದಾಯದವರಿಗೆ ಜಾತಿ ಪ್ರಮಾಣಪತ್ರ ನೀಡದೆ ಕರ್ತವ್ಯ ಲೋಪವೆಸಗುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಕಚೇರಿ ಎದುರು ಜಮಾಯಿಸಿದ ಸಮಿತಿಯ ಪದಾಧಿಕಾರಿಗಳು, ಸಮರ್ಪಕವಾಗಿ ಕೆಲಸ ನಿರ್ವಹಿಸದ ಗ್ರಾಮ ಆಡಳಿತಾಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಮೈಸೂರು ವಿಭಾಗೀಯ ಸಂಚಾಲಕ ಮರಳಿಗ ಶಿವರಾಜು ಮಾತನಾಡಿ, ಸರ್ಕಾರ ಪ್ರತಿ ಕಂದಾಯ ಗ್ರಾಮಕ್ಕೆ ಒಬ್ಬ ಅಧಿಕಾರಿಯನ್ನು ನೇಮಕ ಮಾಡಿದೆ. ಅಧಿಕಾರಿ ರೈತರಿಗೆ ಅನುಕೂಲವಾಗುವಂತೆ ಕೆಲಸದ ವೇಳೆ ಗ್ರಾಮದಲ್ಲಿ ಲಭ್ಯವಿದ್ದು, ಅವರ ಜಮೀನಿನ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಬೇಕು. ಆದರೆ, ಅಧಿಕಾರಿಗಳು ರೈತರಿಗೆ ಸಮರ್ಪಕವಾಗಿ ಕೆಲಸ ಮಾಡಿಕೊಡದೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿ ಸಮುದಾಯಗಳ ಜನರು ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಹಾಕಿದರೆ, ತಪ್ಪು ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಕೇಂದ್ರ ಸ್ಥಾನದಲ್ಲಿ ಉಳಿದುಕೊಂಡು ಕರ್ತವ್ಯ ನಿರ್ವಹಿಸದೆ ಮದ್ದೂರು ಪಟ್ಟಣದ ಖಾಸಗಿ ಕಚೇರಿಗಳನ್ನು ಮಾಡಿಕೊಂಡು ರೈತರನ್ನು ಹಳ್ಳಿಯಿಂದ ಮದ್ದೂರಿಗೆ ಅಲೆದಾಡಿಸುತ್ತಿದ್ದಾರೆ. ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಕರ್ತವ್ಯ ಲೋಪವೆಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವ ಗ್ರಾಮ ಲೆಕ್ಕಾಧಿಕಾರಿಗಳು ಹಳ್ಳಿಗಳನ್ನು ಬಿಟ್ಟು ತಾಲೂಕಿನ ಕೇಂದ್ರಾಡಳಿತ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೋ ಅಂತವರ ಬಗ್ಗೆ ಮೇಲಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ವರದಿ ಮಾಡಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ಮತನಾಡಿ, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಸಮಿತಿಯ ಜಿಲ್ಲಾ ಸಂಚಾಲಕ ಶ್ರೀನಿವಾಸ್, ತಾಲೂಕು ಸಂಚಾಲಕ ನಿಡಘಟ್ಟ ಪ್ರಕಾಶ್, ಮುಖಂಡರಾದ ಹಳ್ಳಿಕೆರೆ ಗುರುಲಿಂಗಯ್ಯ, ನಿಡಘಟ್ಟ ಶಂಕರ್, ಆಬಲವಾಡಿ ತಿಮ್ಮೇಶ್, ಮಲ್ಲನಕುಪ್ಪೆ ರಮೇಶ, ಮಹೇಶ್, ಮರಳಿಗ ಸುರೇಶ್, ಹಳ್ಳಿಕೆರೆ ರವಿ, ಸವಿತಾ, ಗೀತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net