ಮದ್ದೂರಮ್ಮನ ಕೆರೆಗೆ ಗೋವಿಂದ ಕಾರಜೋಳ ಭೇಟಿ

Min
Published on

ಮದ್ದೂರು: ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿರುವ ಮದ್ದೂರಮ್ಮನ ಕೆರೆಗೆ ಗುರುವಾರ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉನ್ನತ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ದೇಶಹಳ್ಳಿ ಕೆರೆ ಸಾಗರದಂತಿದೆ. ಇಂತಹ ಕೆರೆಗಳು ಇರುವುದೇ ಅಪರೂಪ. ಪುರಾತನ ಕೆರೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಕಂಕಣಬದ್ಧವಾಗಿದೆ ಎಂದರು.
ಭಾರಿ ಮಳೆಯಿಂದ ಹಾನಿಯಾದ ಮದ್ದೂರಮ್ಮನ ಕೆರೆ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಹಾಗೂ ಕೆರೆಯನ್ನು ಉನ್ನತೀಕರಿಸುವ ಬಗ್ಗೆ ಸಚಿವರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆ ಒತ್ತುವರಿಯಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಮಾಡಿ ಒತ್ತುವರಿ ತೆರವು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಸ್ಥಳೀಯ ರೈತರಿಂದ ಮನವಿ ಸ್ವೀಕರಿಸಿ ಶೀಘ್ರವಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಸಚಿವರ ವಿಶೇಷ ಕರ್ತವ್ಯಾಧಿಕಾರಿ ಲಕ್ಷ್ಮೀಕಾಂತಜೋಶಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಂಕರೇಗೌಡ, ಕಾರ್ಯಪಾಲಕ ಎಂಜಿನಿಯರ್ ಎಸ್.ಎಚ್.ನಾಗರಾಜು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಸ್.ಎನ್.ನಾಗರಾಜು, ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ, ಎಂಜಿನಿಯರ್‌ಗಳಾದ ತಾರಾ, ವೆಂಕಟೇಶ್ ಹಾಗೂ ಮುಖಂಡರಾದ ಚೊಟ್ಟನಹಳ್ಳಿ ಇಂದುಶೇಖರ್, ಪಟೇಲ್‌ಶಿವಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net