ಶಿಕ್ಷಕ, ಇಂಜಿನಿಯರ್ ಸೇವೆ ಸದಾಕಾಲ ಮಾನ್ಯ

23M.D.R.4
Published on

ಮದ್ದೂರು: ದೇಶಕ್ಕೆ ಶಿಕ್ಷಕರು ಮತ್ತು ಇಂಜಿನಿಯರುಗಳು ಸಲ್ಲಿಸುವ ಸೇವೆ ಸದಾಕಾಲ ಮಾನ್ಯವಾದದ್ದು ಎಂದು
ಚುಂಚುಶ್ರೀ ಗೆಳೆಯರ ಬಳಗದ ಅಧ್ಯಕ್ಷ ಪ್ರೊ ಬಿ.ಕೃಷ್ಣ ಹೇಳಿದರು.
ಪಟ್ಟಣದ ಭಾರತ್ ವಿಕಾಸ್ ಪರಿಷದ್ ಕದಂಬ ಶಾಖೆ ವತಿಯಿಂದ ಶಿಕ್ಷಕರ ಹಾಗೂ ಅಭಿಯಂತರರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.ರಾಷ್ಟ್ರ ಕಟ್ಟಲು ಮತ್ತು ಉತ್ತಮ ಸಮಾಜ ನಿರ್ಮಾಣ ಮಾಡಲು ಇಬ್ಬರು ಮಹನೀಯರ ಕೊಡುಗೆ ಅಪಾರ. ದೇಶದ ಜನಮಾಸದಲ್ಲಿ ಅಚ್ಚಳಿಯದೆ ಉಳಿದಿರುವ ಎರಡು ವ್ಯಕ್ತಿತ್ವ ಎಂದರೆ ಡಾ.ರಾಧಾಕೃಷ್ಣನ್ ಮತ್ತು ಸರ್ ಎಂ.ವಿಶ್ವೇಶ್ವರಯ್ಯ. ಒಬ್ಬರು ಬೋಧಿಸಿ, ರಾಷ್ಟ್ರವನ್ನು ಮುನ್ನಡೆಸಿದರು. ಇನ್ನೊಬ್ಬರು ನಾಡನ್ನು ಹಸಿರಾಗಿಸಿ ಮಾದರಿ ಆಡಳಿತ ನೀಡುವ ಮೂಲಕ ಮಹೋನ್ನತ ಸೇವೆ ಮಾಡಿದರು ಎಂದು ಸ್ಮರಿಸಿದರು.
ರಾಷ್ಟ್ರ ನಿರ್ಮಾತೃಗಳು: ಪುರಸಭೆ ಅಧ್ಯಕ್ಷೆ ಕೋಕಿಲಾ ಮಾತನಾಡಿ, ವಿದ್ಯಾರ್ಥಿಗಳನ್ನು ಸುಸಂಸ್ಕೃತ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದರು. ಶಿಕ್ಷಕರು ಮತ್ತು ಇಂಜಿನಿಯರ್‌ಗಳು ರಾಷ್ಟ್ರ ನಿರ್ಮಾತೃಗಳು. ಬಾಲ್ಯದಿಂದಲೇ ನಮ್ಮನ್ನು ತಿದ್ದಿ, ತೀಡಿ ಉತ್ತಮ ಮಾರ್ಗದಲ್ಲಿ ಸಾಗುವಂತೆ ಮಾಡಿದ ಶಿಕ್ಷಕರನ್ನು ಪ್ರತಿದಿನವೂ ನೆನೆಯಬೇಕು. ಅವರಿಗೆ ಗೌರವಿಸುವ ಪ್ರವೃತ್ತಿ ಮೈಗೂಡಿಸಿಕೊಳ್ಳಬೇಕು. ಗುರುವಿನ ಕೃಪೆಯಿಂದಲೇ ಅನೇಕರು ಉನ್ನತ ಹುದ್ದೆ ಅಲಂಕರಿಸಿ, ವಿಶ್ವ ಮಟ್ಟಕ್ಕೆ ಏರಿದ್ದಾರೆ ಎಂದರು ತಿಳಿಸಿದರು. ಇಂತಹ ಸೇವೆಯಲ್ಲಿ ಇರುವವರನ್ನು ಗುರುತಿಸಿ ಅಭಿನಂದಿಸುತ್ತಿರುವುದು ಶ್ಲಾಘನೀಯ ಎಂದರು. ಕಸಾಪ ತಾಲೂಕು ಅಧ್ಯಕ್ಷ ಕೆ.ಎಸ್.ಸುನಿಲ್‌ಕುಮಾರ್ ಮಾತನಾಡಿದರು.
ಅಭಿನಂದನೆ: ಸರ್ಕಾರಿ ಶಾಲೆ ಶಿಕ್ಷಕಿಯರಾದ ಅಂಬುಜಾಕ್ಷಿ, ಸಿ.ಸುನೀತಾ ಹಾಗೂ ಇಂಜಿನಿಯರ್‌ಗಳಾದ ಕೊದಂಡರಾಮಯ್ಯ, ಶಿವಕುಮಾರ್‌ಗೆ ಗೌರವಿಸಲಾಯಿತು. ಸಂಸ್ಥೆ ಅಧ್ಯಕ್ಷ ಎಂ.ಮಹಾಲಿಂಗಯ್ಯ, ಖಜಾಂಚಿ ಚಂದ್ರಶೇಖರ್, ಸಂಚಾಲಕ ಡಿ.ಪಿ.ಸ್ವಾಮಿ, ಪದಾಧಿಕಾರಿಗಳಾದ ಶಿವನಂಜಯ್ಯ, ಅಪೂರ್ವಚಂದು, ಬಿ.ವಿ.ಹಳ್ಳಿ ನಾರಾಯಣ್, ನಾಗೇಶ್, ಮುರಳಿ, ಆನಂದ್, ಶಂಕರಯ್ಯ, ರಾಮಚಂದ್ರು ಇತರರಿದ್ದರು.

  • ಪ್ರೊ ಬಿ.ಕೃಷ್ಣ ಅಭಿಮತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net