

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯಿಂದ ಶಿಂಷಾ ಬಲದಂಡೆ ಹಾಗೂ ಎಡದಂಡೆ ನಾಲೆಗೆ ಹರಿಸಲಾಗುತ್ತಿದ್ದ ನೀರನ್ನು ದಿಢೀರ್ ಸ್ಥಗಿತಗೊಳಿಸಲಾಗಿದೆ. ಭತ್ತದ ಹೊಟ್ಲು ಹಾಗೂ ನಾಟಿ ಮಾಡಿದ ರೈತರು ಏನು ಮಾಡಬೇಕು ಎಂದು ರೈತ ಸಂಘ ಮದ್ದೂರು ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಲ್.ವಿನೋದ್‌ಬಾಬು ಪ್ರಶ್ನಿಸಿದರು.
ಕಳೆದ ವರ್ಷ ಬೆಳೆಗೆ ನೀರು ಕೊಡಲು ಸಾಧ್ಯವಿಲ್ಲ ಎಂದು ಹೇಳಿ ಕೃತಕ ಬರ ಸೃಷ್ಟಿಸಿದ್ದರು. ಈ ಬಾರಿ ಹರಿಸಲಾಗುತ್ತಿದ್ದ ನೀರನ್ನು ಏಕಾಏಕಿ ನಿಲ್ಲಿಸಲಾಗಿದೆ. ಶಿಂಷಾ ಬಲದಂಡೆ ವ್ಯಾಪ್ತಿಯಲ್ಲಿ 3,250 ಎಕರೆ ಮತ್ತು ಎಡದಂಡೆಯಲ್ಲಿ 4 ಸಾವಿರ ಎಕರೆ ಪ್ರದೇಶ ಜಮೀನಿದೆ. ನಾಲೆಗೆ ನೀರು ಬಿಡುವ ಅಥವಾ ಬಿಡದಿರುವ ಕುರಿತು ಅಧಿಕೃತ ಮಾಹಿತಿ ರೈತರಿಗೆ ನೀಡಿಲ್ಲ. ಒಂದು ಕಟ್ಟು ನೀರು ಕೊಟ್ಟು ಈಗ ನಿಲ್ಲಿಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ನೀರು ಕೊಡದಿರುವ ಬಗ್ಗೆ ಮದ್ದೂರು ಶಾಸಕ ಕೆ.ಎಂ.ಉದಯ್, ಎಂಎಲ್‌ಸಿಗಳಾದ ಮಧು ಮಾದೇಗೌಡ, ದಿನೇಶ್ ಗೂಳೀಗೌಡ, ವಿವೇಕಾನಂದ, ಕೇಂದ್ರ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರಿಗಳು ಉತ್ತರಿಸಬೇಕು ಎಂದು ತಾಕೀತು ಮಾಡಿದರು.
ಕೆಆರ್‌ಎಸ್ ಭರ್ತಿಯಾಗಿದ್ದರೂ ನೀರು ನೀಡುತ್ತಿಲ್ಲ. ಇಗ್ಗಲೂರು ಡ್ಯಾಂನಿಂದ ನೆರೆಯ ಚನ್ನಪಟ್ಟಣ ತಾಲೂಕಿಗೆ ನೀರು ನೀಡಲಾಗುತ್ತಿದೆ. ಸಕಾಲಕ್ಕೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಆದರೆ ಶಿಂಷಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಕೂಡಲೇ ಶಿಂಷಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ನೀಡಬೇಕು. ಮಾತ್ರವಲ್ಲದೆ ಶಿಂಷಾ ವ್ಯಾಪ್ತಿಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಜತೆಗೆ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಉಪಾಧ್ಯಕ್ಷ ಶಂಕರ್, ಆನಂದ್, ಸಿದ್ದೇಗೌಡ, ರಾಮಕೃಷ್ಣ ಇದ್ದರು.