ಮದ್ದೂರು ತಾಲೂಕು ಕಚೇರಿಗೆ ಮುತ್ತಿಗೆ

27M.D.R.3
Published on

ಮದ್ದೂರು: ಸರ್ಕಾರ ತಕ್ಷಣ ಬರ ಪರಿಹಾರ ನೀಡಬೇಕು. ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಪ್ಪಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.


ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.


ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ ಮಾತನಾಡಿ, ಮಂಡ್ಯ ಜಿಲ್ಲೆ ಬರದ ಸುಳಿಗೆ ಸಿಲುಕಿ ನಲುಗುತ್ತಿದೆ. ವಿಶ್ವೇಶ್ವರಯ್ಯ ನಾಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬೆಳೆದಿರುವ ಬೆಳೆಗಳು ಒಣಗಿವೆ. ಆದ್ದರಿಂದ ತಕ್ಷಣ ಒಂದು ಎಕರೆಗೆ ಒಂದು ಲಕ್ಷ ರೂ.ನಂತೆ ಬರ ಪರಿಹಾರ ಮಂಜೂರು ಮಾಡಬೇಕು. ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ವಿಳಂಬವಾಗುತ್ತಿದೆ. ರೈತರನ್ನು ಅಲೆದಾಡುವ ಪ್ರವೃತ್ತಿ ಹೆಚ್ಚುತ್ತಿದೆ. ತಾಲೂಕು ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.


ತಾಲೂಕು ಕಚೇರಿಯಲ್ಲಿ ಖಾತೆ ತಿದ್ದುಪಡಿ ಮಾಡುವುದು, ನಕ್ಷೆ ತಯಾರಿಸುವುದು, ಸರ್ವೇ ಮಾಡಿಸುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ದಾಖಲೆಗಳನ್ನು ಹುಡುಕಿಕೊಡಲು ವಿನಾಕಾರಣ ಸಮಯ ತೆಗೆದುಕೊಳ್ಳುತ್ತಿರುವ ಅಧಿಕಾರಿಗಳು ದಾಖಲೆಗಳನ್ನು ನೀಡದೆ ಅಲೆದಾಡಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ವಿಶ್ವೇಶ್ವರಯ್ಯ ನಾಲೆಯ ಕೊನೇ ಭಾಗಕ್ಕೆ ತಕ್ಷಣ ನೀರು ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ತಮಿಳುನಾಡಿಗೆ ನಿರಂತರವಾಗಿ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.


ರೈತ ಸಂಘದ ಹಿರಿಯ ಮುಖಂಡ ಕೆ.ಶೆಟ್ಟಹಳ್ಳಿ ರವಿಕುಮಾರ್ ಮಾತನಾಡಿ, ಪ್ರಗತಿಪರ ರೈತ ವರ್ತೂರು ಸಂತೋಷ ಹಳ್ಳಿಕಾರ್ ತಳಿಗಳನ್ನು ಸಾಕುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ. ಇಂತಹ ಅವರನ್ನು ಹುಲಿ ಉಗುರು ಪ್ರಕರಣದಲ್ಲಿ ಯಾವುದೇ ನೋಟಿಸ್ ನೀಡದೆ ಬಂಧಿಸಿರುವುದು ಸರಿಯಲ್ಲ. ಉಳ್ಳವರಿಗೊಂದು ಕಾನೂನು ಇಲ್ಲದವರಿಗೆ ಒಂದು ಕಾನೂನು ಎಂಬ ಮನೋ ಧೋರಣೆಯನ್ನು ಬಿಡಬೇಕು. ಸಿನಿಮಾ ನಟರು, ರಾಜಕಾರಣಿಗಳು ಸೇರಿದಂತೆ ಉದ್ಯಮಿಗಳು ಹಾಗೂ ಇತರರು ಹುಲಿ ಉಗುರುಗಳನ್ನು ಇಟ್ಟುಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಂತೋಷ್ ಅವರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಸಂಬಂಧ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.


ತಾಲೂಕಿನ ತೊರೆಬೊಮ್ಮನಹಳ್ಳಿಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಸ್ಥಳವನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸಬೇಕು ಎಂದರು.


ಪ್ರತಿಭಟನಾಕಾರರಿಂದ ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಅವರು ಮನವಿ ಸ್ವೀಕರಿಸಿ ಮಾತನಾಡಿ, ತೊರೆ ಬೊಮ್ಮನಹಳ್ಳಿಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಸ್ಥಳವನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸಲಾಗುವುದು. ರೈತರು ನೀಡಿರುವ ಬೇಡಿಕೆಯನ್ನು ನಿಯಮಾನುಸಾರ ಸರ್ಕಾರಕ್ಕೆ ಕಳಿಸಿಕೊಡಲಾಗುವುದು ಎಂದು ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ರೈತ ಸಂಘದ ತಾಲೂಕು ಅಧ್ಯಕ್ಷ ಗೂಳೂರು ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ವಿನೋದ್‌ಕುಮಾರ, ಮುಖಂಡರಾದ ಜಿ.ಎ.ಶಂಕರ, ವರದರಾಜು, ಲಿಂಗಪ್ಪ, ಜಿ.ಎಚ್. ವೀರಪ್ಪ, ಗೊಲ್ಲರದೊಡ್ಡಿ ಅಶೋಕ, ಪಟೇಲ್ ಬೋರೆಗೌಡ, ಚಿಕ್ಕತಾಯಮ್ಮ, ತಮ್ಮಯ್ಯ, ಸ್ವಾಮಿ, ವೆಂಕಟೇಗೌಡ, ರಾಮಲಿಂಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net