ವೃದ್ಧೆಯ ಚಿನ್ನದ ಸರ ಕಸಿದು ಪರಾರಿ

06M.D.R.9
Published on

ಮದ್ದೂರು: ಪಟ್ಟಣದಲ್ಲಿ ಹಾಡಹಗಲೇ ಸೋಮವಾರ ಕಳ್ಳರು ಮನೆ ಮುಂದೆ ಕುಳಿತಿದ್ದ ವೃದ್ಧೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಪಟ್ಟಣದ ಕೆನರಾ ಬ್ಯಾಂಕ್ ರಸ್ತೆಯ ಬೆಸ್ತರ ಬೀದಿಯ ನಿವಾಸಿ ಕೆಂಪಮ್ಮ (70) ಚಿನ್ನದ ಸರ ಕಳೆದುಕೊಂಡವರು. ಮನೆ ಮುಂಭಾಗ ಕುಳಿತಿದ್ದ ಕೆಂಪಮ್ಮ ಅವರ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳ ಪೈಕಿ ಒಬ್ಬ ಕೆಳಗಿಳಿದು, ‘ಹೊಸದಾಗಿ ಸಾಯಿಬಾಬಾ ದೇವಸ್ಥಾನ ನಿರ್ಮಿಸಲಾಗುತ್ತಿದೆ. ಧನ ಸಹಾಯ ಮಾಡಿ’ ಎಂದು ಕೋರುವ ನೆಪದಲ್ಲಿ ವೃದ್ಧೆ ಧರಿಸಿದ್ದ 70 ಗ್ರಾಂನ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ವೃದ್ಧೆ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ, ಅಕ್ಕಪಕ್ಕದ ಮನೆಯವರು ಹಾಗೂ ಸ್ಥಳೀಯರು ಸರಗಳ್ಳರನ್ನು ಬೆನ್ನಟ್ಟಿದ್ದರೂ ಪ್ರಯೋಜನವಾಗಲಿಲ್ಲ. ದುಷ್ಕರ್ಮಿಗಳು ಬೈಕನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಕೃಷ್ಣಪ್ಪ, ಮದ್ದೂರು ವೃತ್ತ ನಿರೀಕ್ಷಕ ಶಿವಕುಮಾರ್, ಮದ್ದೂರು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ಹಾಗೂ ಅಪರಾಧ ವಿಭಾಗದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net