

ಮದ್ದೂರು : ಕ್ರೀಡೆಯಲ್ಲಿ ಸೋಲು, ಗೆಲುವುಗಳಿಗಿಂತಾ ಭಾಗವಹಿಸುವ ಉತ್ಸಾಹ ಬಹು ಮುಖ್ಯ ಎಂದು ಪುರಸಭಾ ಅಧ್ಯಕ್ಷೆ ಕೋಕಿಲಾ ಅರುಣ್ ತಿಳಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಚಂದೂಪುರ ವತಿಯಿಂದ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಆಟೋಟಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬಹುದು. ದೇಹದಲ್ಲಿ ಉತ್ತಮ ಆರೋಗ್ಯವಿದ್ದರೆ ಮಾತ್ರ ದೈನಂದಿನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಕ್ರೀಡೆ ಮತ್ತು ಯೋಗದಲ್ಲಿ ಭಾಗವಹಿಸುವುದು ನಮ್ಮ ದೈನಂದಿನ ಚಟುವಟಿಕೆ ಆಗಬೇಕು ಎಂದು ಕೋಕಿಲಾ ಸಲಹೆ ನೀಡಿದರು. ಕ್ರೀಡಾಕೂಟದಲ್ಲಿ ತಾಲೂಕಿನ 22 ಕಾಲೇಜುಗಳ 1,400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಆಟೋಟಗಳಲ್ಲಿ ಸೆಣಸಿದ್ದು ಗಮನ ಸೆಳೆಯಿತು.