

ಮದ್ದೂರು: ಬಿಇಒ ಕಾಳೀರಯ್ಯ ಸಲಹೆ
ಮದ್ದೂರು: ವಿದ್ಯಾರ್ಥಿಗಳಿಗೆ ಪ್ರತಿಭಾ ವಿಕಸನಕ್ಕೆ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಪೂರಕ ವೇದಿಕೆಯನ್ನು ಕಲ್ಪಿಸಲಿವೆ ಎಂದು ಬಿಇಒ ಕಾಳೀರಯ್ಯ ಹೇಳಿದರು.
ಪಟ್ಟಣದ ಗ್ಲೋಬಲ್ ಇಂಟರ್‌ನ್ಯಾಷನಲ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳ ಸಾಮರ್ಥ್ಯ ಉನ್ನತೀಕರಣಕ್ಕೆ ಸಹಕಾರಿ. ಶಿಕ್ಷಣ ಮತ್ತು ಮನರಂಜನೆಯನ್ನು ಸಂಯೋಜಿಸುವ ಈ ಕಾರ್ಯಕ್ರಮ ಅರಿವಿನ ಕೌಶಲಗಳನ್ನೂ ಅಭಿವೃದ್ಧಿಪಡಿಸಲಿದೆ ಎಂದರು.
ಪುರಸಭೆ ಅಧ್ಯಕ್ಷೆ ಕೋಕಿಲಾ ಮಾತನಾಡಿ, ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ನಾವು ಶಿಕ್ಷಣದೊಂದಿಗೆ ಮೌಲ್ಯಾಧಾರಿತ ವಿಷಯ ಗ್ರಹಿಸುವತ್ತಲೂ ಗಮನಹರಿಸಬೇಕು. ಸಾಂಸ್ಕೃತಿಕ, ಸಾಹಿತ್ಯ ಸ್ಪರ್ಧೆಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು ಎಂದರು. ಮುಖ್ಯ ಶಿಕ್ಷಕರಾದ ಪ್ರಕಾಶ್, ಎ.ವಿ.ಪಾವನಾ, ವೈ.ಸಿ.ಪ್ರಸನ್ನ, ಗ್ಲೋಬಲ್ ಇಂಟರ್‌ನ್ಯಾಷನಲ್ ಶಾಲೆ ಅಧ್ಯಕ್ಷ ಶಿವನಂಜಯ್ಯ, ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್.ಸಂತೋಷ್‌ಗೌಡ, ಪುರಸಭೆ ಸದಸ್ಯೆ ಬಿ.ಸಿ.ಸರ್ವಮಂಗಳಾ ಮತ್ತು ಶಿಕ್ಷಣ ರಂಗದ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಹಾಜರಿದ್ದರು.