

ಮದ್ದೂರು: ಪಟ್ಟಣದ ಅಂಚೆ ಕಚೇರಿಯಲ್ಲಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಮಂಡ್ಯಕ್ಕೆ ಸ್ಥಳಾಂತರಿಸಲು ಚಿಂತನೆ ನಡೆಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಡೀ ದೇಶದಲ್ಲೇ ತಾಲೂಕು ಕೇಂದ್ರದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭವಾಗಿರುವುದು ಮದ್ದೂರು ಪಟ್ಟಣದಲ್ಲಿ ಎಂಬುವುದು ಹೆಗ್ಗಳಿಕೆಯ ಸಂಗತಿಯಾಗಿತ್ತು.
ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಆರಂಭವಾಗಬೇಕಿದ್ದ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ಸಂಸದ ಶಿವರಾಮೇಗೌಡ ಅವರನ್ನು ಅಂದು ಶಾಸಕರಾಗಿದ್ದ ಡಿ.ಸಿ.ತಮ್ಮಣ್ಣ ಅವರು ಮನವೊಲಿಸಿದ್ದರಿಂದ ಪಟ್ಟಣದಲ್ಲಿ ಸೇವಾ ಕೇಂದ್ರ ಆರಂಭಗೊಂಡಿತ್ತು. ಇದರಿಂದ ತಾಲೂಕಿನ ಜನರು ಬೇರೆ ಜಿಲ್ಲೆಗಳಿಗೆ ತೆರಳಿ ಪಾಸ್ ಪೋರ್ಟ್ ಮಾಡಿಸಬೇಕಾದ ಸಮಸ್ಯೆ ತಪ್ಪಿತ್ತು.
ಆದರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ದಿಶಾ ಸಭೆಯಲ್ಲಿ ಮದ್ದೂರಿನಲ್ಲಿರುವ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ಮಂಡ್ಯಕ್ಕೆ ಸ್ಥಳಾಂತರ ಮಾಡಲು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಲಾಯಿತು. ಈ ಹಿನ್ನೆಲೆಯಲ್ಲಿ ಮದ್ದೂರು ಪಟ್ಟಣದಲ್ಲಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರ ಸ್ಥಳಾಂತರವಾಗುತ್ತಿದ್ದು, ಇದರಿಂದ ತಾಲೂಕಿನ ಸಾವಿರಾರು ಜನರಿಗೆ ಅನಾನುಕೂಲವಾಗಲಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ಮದ್ದೂರಿನಲ್ಲೇ ಉಳಿಸಿಕೊಂಡು ಮಂಡ್ಯ ನಗರದಲ್ಲಿ ಪಾಸ್ ಪೋರ್ಟ್ ಉಪ ಕಚೇರಿ ತೆರೆಯಲಿ ಎಂಬುವುದು ತಾಲೂಕಿನ ಜನರ ಆಗ್ರಹವಾಗಿದೆ.