ಮದ್ದೂರು ಪುರಸಭೆ ಕಾಂಗ್ರೆಸ್ ತೆಕ್ಕೆಗೆ

09M.D.R.5
ಮದ್ದೂರು ಪುರಸಭೆಯ ನೂತನ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್ ಅವರನ್ನು ಶಾಸಕ ಕೆ.ಎಂ.ಉದಯ್ ಹಾಗೂ ಸ್ಥಳೀಯ ಮುಖಂಡರು ಅಭಿನಂದಿಸಿದರು. ಕದಲೂರು ರಾಮಕೃಷ್ಣ, ಚಲುವರಾಜು, ಸುರೇಶ್‌ಕಂಠಿ, ಎಂ.ಪಿ.ಅಮರ್‌ಬಾಬು ಇದ್ದರು.
Published on

ಮದ್ದೂರು: ತೀವ್ರ ಕುತೂಹಲ ಮೂಡಿಸಿದ್ದ ಪಟ್ಟಣದ ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡು ಅಚ್ಚರಿ ಎಂಬಂತೆ ಕಾಂಗ್ರೆಸ್ ತನ್ನ ತೆಕ್ಕೆಗೆ ಪಡೆಯುವ ಮೂಲಕ ಜೆಡಿಎಸ್ ತೀವ್ರ ಮುಖಭಂಗ ಅನುಭವಿಸುವಂತೆ ಮಾಡಿದೆ.


ಪಟ್ಟಣದ ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಕೋಕಿಲಾ ಅರುಣ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತೈಲೂರು ಪ್ರಸನ್ನ, ಜೆಡಿಎಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಶೋಭರಾಣಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮನೋಜ್‌ಕುಮಾರ್ ಅವರು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಚುನಾವಣೆ ನಡೆದು ಕ್ರಮವಾಗಿ 15 ಮತಗಳನ್ನು ಪಡೆದು ಕಾಂಗ್ರೆಸ್‌ನ ಕೋಕಿಲಾ ಅರುಣ್‌ಕುಮಾರ್ ಅಧ್ಯಕ್ಷರಾಗಿ ಹಾಗೂ ತೈಲೂರು ಪ್ರಸನ್ನ ಉಪಾಧ್ಯಕ್ಷರಾಗಿ ಆಯ್ಕಯಾದರು.
ಜೆಡಿಎಸ್ ಪಕ್ಷದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶೋಭರಾಣಿ ಹಾಗೂ ಮನೋಜ್‌ಕುಮಾರ ಅವರು ಕ್ರಮವಾಗಿ 8 ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ಪ್ರಭಾರ ತಹಸೀಲ್ದಾರ್ ಸೋಮಶೇಖರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಪುರಸಭೆಯ ಹಿಂದಿನ ಅಧಿಕಾರಾವಧಿಯಲ್ಲಿ ಅಧ್ಯಕ್ಷರಾಗಿದ್ದ ಸುರೇಶ್ ಕುಮಾರ್ ಮತದಾನ ಪ್ರಕ್ರಿಯೆಯಿಂದ ಗೈರಾಗಿದ್ದರು.
ಕಾಂಗ್ರೆಸ್‌ನ ನಾಲ್ಕು ಸದಸ್ಯರ ಪೈಕಿ ಬಹುದಿನಗಳಿಂದ ಓರ್ವ ಸದಸ್ಯ ಹೊರಗುಳಿದಿದ್ದರು. ಮೂರು ಸ್ಥಾನಗಳನ್ನು ಮಾತ್ರ ಹೊಂದಿದ್ದ ಕಾಂಗ್ರೆಸ್ ಸ್ಥಳೀಯ ಶಾಸಕ ಕೆ.ಎಂ.ಉದಯ್ ನೇತೃತ್ವದಲ್ಲಿ ಪಟ್ಟಣದ ಪುರಸಭೆಯ ಇತಿಹಾಸದಲ್ಲಿಯೇ ದಾಖಲೆ ಎಂಬಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡನ್ನು ತನ್ನದಾಗಿಸಿಕೊಂಡು ಅಚ್ಚರಿ ಮೂಡಿಸಿದೆ.

23 ಸದಸ್ಯ ಬಲದ ಪುರಸಭೆಯಲ್ಲಿ ಮಂಡ್ಯ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಶಾಸಕ ಕೆ.ಎಂ.ಉದಯ್ ಸೇರಿದಂತೆ ಒಟ್ಟು 25 ಮಂದಿ ಮತ ಹಕ್ಕು ಹೊಂದಿದ್ದು, 3 ಕಾಂಗ್ರೆಸ್, 4 ಪಕ್ಷೇತರ, 1 ಬಿಜೆಪಿ, 6 ಜೆಡಿಎಸ್ ಸದಸ್ಯರನ್ನು ಒಟ್ಟುಗೂಡಿಸಿ ಶಾಸಕ ಕೆ.ಎಂ.ಉದಯ್ ಮತ ಸೇರಿದಂತೆ ಒಟ್ಟು 15 ಒಳಗೊಂಡಂತೆ 2 ಸ್ಥಾನಗಳನ್ನು ಗೆಲ್ಲುವಲ್ಲಿ ಶಾಸಕರ ತಂತ್ರಗಾರಿಕೆ ಫಲ ನೀಡಿದ್ದು ವಿಶೇಷವಾಗಿತ್ತು.
ಈ ಹಿಂದೆ ಅಧಿಕಾರದಲ್ಲಿದ್ದ ಜೆಡಿಎಸ್ 12 ಸದಸ್ಯರನ್ನು ಹೊಂದಿದ್ದು, 4 ಪಕ್ಷೇತರ ಸದಸ್ಯರ ಬೆಂಬಲದೊಡನೆ ಹಿಂದಿನ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸೇರಿದಂತೆ 17 ಮತದೊಡನೆ ಮೊದಲ 30 ತಿಂಗಳ ಎರಡು ವರಿಷ್ಠ ಹುದ್ದೆಗಳನ್ನು ತಮ್ಮದಾಗಿಸಿಕೊಂಡಿದ್ದರು. ಜೆಡಿಎಸ್‌ಗೆ ಸ್ಪಷ್ಟ ಬಹುಮತ ವಿದ್ದರೂ ಈ ಚುನಾವಣೆಯಲ್ಲಿ 8 ಮತಗಳನ್ನು ಮಾತ್ರ ಪಡೆದು ಜೆಡಿಎಸ್ ತೀವ್ರ ಹಿನ್ನಡೆ ಅನುಭವಿಸಿತು.

ಈ ವೇಳೆ ಮನ್‌ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಜಿ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಪುರಸಭಾ ಮಾಜಿ ಅಧ್ಯಕ್ಷ ಎಂ.ಪಿ.ಅಮರ್ ಬಾಬು, ಮುಖಂಡರಾದ ಕೆ.ಆರ್.ಮಹೇಶ್, ಶಂಕರೇಗೌಡ, ಅರುಣ, ವಿಜಯ್‌ಕುಮಾರ್, ಆರ್.ಸಿ.ಮಹೇಶ್, ರಘು ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net